ಕುಣಿಗಲ್: ಲಿಂಗ ತಾರತಮ್ಯ ತಡೆಯುವುದರ ಜೊತೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಪಿಡುಗು ನಿರ್ಮೂಲನೆಯಾದಾಗ ನಿಜ ಅರ್ಥದಲ್ಲಿ ಮಹಿಳಾ ಸಬಲೀಕರಣವಾಗುತ್ತದೆ ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಲೈಂಗಿಕ ಕಿರುಕುಳ ತಡೆ ಸಮಿತಿ, ಮಹಿಳಾ ಸಹಾಯವಾಣಿ, ರೇಂಜರ್ಸ್ ಮತ್ತು ರೋವರ್ಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಸಬಲೀಕರಣ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ಲಿಂಗ ತಾರತಮ್ಯಕ್ಕೆ ಆಸ್ಪದ ನೀಡದೆ ಸಮ ಸಮಾಜದ ನಿರ್ಮಾಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಖಚಿತವಾಗಿ ಹೇಳಲಾಗಿದೆ, ಅದರೂ ಸಮಾಜದಲ್ಲಿ ಪುರುಷ ಮತ್ತು ಸ್ತ್ರೀಯರ ನಡುವೆ ಕಂದಕ ಹೆಚ್ಚಿವೆ, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಎಲ್ಲಾ ರಂಗದಲ್ಲೂ ಅತ್ಯಂತ ಹೆಚ್ಚು ಒತ್ತು ನೀಡಿದೆ, ವಿದ್ಯಾರ್ಥಿನಿಯರು ಇವುಗಳ ಬಗ್ಗೆ ಅರಿವು ಹೊಂದಿ ಹಕ್ಕುಗಳು ಮತ್ತು ಕರ್ತವ್ಯ ತಿಳಿದಾಗ ಎಲ್ಲಾ ರಂಗದಲ್ಲೂ ಮಹಿಳಾ ಸಬಲೀಕರಣ ವಾತಾವರಣಕ್ಕೆ ಪೂರಕವಾಗುತ್ತದೆ, ಪ್ರಸ್ತುತ ದಿನಗಳಲ್ಲಿ ಕೃತಿಕ ಬುದ್ಧಿಮತ್ತೆ ರಂಗ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಯಂತ್ರಗಳೊಂದಿಗೆ ಸ್ಪರ್ಧೆ ಮಾಡುವ ಅನಿವಾರ್ಯತೆ ಹೆಚ್ಚಾಗುತ್ತಿರುವುದರಿಂದ ಮಹಿಳೆಯರು ಈ ನಿಟ್ಟಿನಲ್ಲಿ ಶ್ರಮ ವಹಿಸಿ ಅಭ್ಯಾಸ ಮಾಡಿ ಪ್ರಾವೀಣ್ಯತೆ ಹೊಂದುವ ಮೂಲಕ ಸಧೃಢ ಶಕ್ತಿಯಾಗಿ ಹೊರ ಹೊಮ್ಮಬೇಕಿದೆ ಎಂದರು.
ತುಮಕೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ಸಂಚಾಲಕಿ ಡಾ.ಜ್ಯೋತಿ ಮಾತನಾಡಿ, ವಿದ್ಯಾರ್ಥಿನಿಯರು ಅವರ ಶಕ್ತಿ ಅರ್ಥ ಮಾಡಿಕೊಳ್ಳಬೇಕಾಗಿದೆ, ಯಾವುದೇ ರಂಗದಲ್ಲೂ ದೊಡ್ಡ ಕನಸು ಕಾಣುವ ಮೂಲಕ ಕಂಡ ಕನಸು ನನಸಾಗಿಸಲು ಗುರಿ ಮುಟ್ಟುವ ತನಕ ಸತತ ಶ್ರಮ ಪಡಬೇಕಿದೆ, ಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಆತ್ಮವಿಶ್ವಾಸದಿಂದ ಮುನ್ನಡೆಯುವ ಶಕ್ತಿ ರೂಢಿಸಿಕೊಳ್ಳಬೇಕೆಂದರು.
ಪ್ರಾಂಶುಪಾಲೆ ಪ್ರೊ.ಮಾಯಾ ಸಾರಂಗಪಾಣಿ ಅಧ್ಯಕ್ಷತೆ ವಹಿಸಿದ್ದು, ಐಕ್ಯೂಎಸಿ ಸಂಚಾಲಕ ಡಾ.ಜೆ.ಶಿವಕುಮಾರ್, ಲೈಂಗಿಕ ಕಿರುಕುಳ ತಡೆ ಸಮಿತಿಯ ಸಂಚಾಲಕಿ ಡಾ.ಲಕ್ಷ್ಮಿ ನರಸಮ್ಮ, ಸಹ ಪ್ರಾಧ್ಯಾಪಕ ಪ್ರೊ.ರಾಮಾಂಜನಪ್ಪ, ಡಾ.ಎಂ.ಗೋವಿಂದರಾಯ, ಅಧೀಕ್ಷಕ ಚೆಲುವಮೂರ್ತಿ, ಮಹಿಳಾ ಸಹಾಯವಾಣಿ ಸಂಚಾಲಕಿ ಡಾ.ಮಮತಾ, ಡಾ.ಗಿರಿಜಾಂಬ, ನಾಗಮ್ಮ.ಹೆಚ್.ಎನ್, ಮೈಲಾರಯ್ಯ.ಪಿಎಲ್, ನಾರಾಯಣ ದಾಸ್, ಹನುಮಂತಪ್ಪ ಇತರರು ಇದ್ದರು.
Comments are closed.