ಗುಬ್ಬಿ ತಾಲ್ಲೂಕಲ್ಲಿ ಮುಂದುವರೆದ ಮೌಢ್ಯಾಚರಣೆ

ಗೊಲ್ಲರಹಟ್ಟಿಗಳಲ್ಲಿ ಅಧಿಕಾರಿಗಳಿಂದ ಅರಿವು- ಜೊತೆಗೆ ಕ್ರಮದ ಎಚ್ಚರಿಕೆ

136

Get real time updates directly on you device, subscribe now.


ಗುಬ್ಬಿ: ತಾಲೂಕಿನಲ್ಲಿ ನ್ಯಾಯಾಧೀಶರು, ತಹಶೀಲ್ದಾರ್, ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಸೇರಿದಂತೆ ಬಹುತೇಕ ಅಧಿಕಾರಿಗಳು ಗೊಲ್ಲರಹಟ್ಟಿಯಲ್ಲಿ ಇನ್ನೂ ಮುಂದುವರೆಯುತ್ತಿರುವ ಮೌಢ್ಯಾಚರಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುತ್ತಿದ್ದರು ಸಹ ಸಂಪೂರ್ಣವಾಗಿ ಮೌಢ್ಯಾಚರಣೆ ತಡೆಯಲು ಮಾತ್ರ ಇದುವರೆಗೂ ಸಾಧ್ಯವಾಗುತ್ತಿಲ್ಲ.
ಅಲ್ಲೊಂದು ಇಲ್ಲೊಂದು ಮೌಢ್ಯ ಪ್ರಕರಣ ಕಾಣುತ್ತಲೇ ಇವೆ, ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಇಲ್ಲ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎನ್ನುವ ಮಹಿಳೆಯರು ಮತ್ತೆ ಅದೇ ದಾರಿ ತುಳಿಯುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.

ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಚಿಕ್ಕ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಹಾಗೂ ಕೆಲವು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಮತ್ತೆ ಗೊಲ್ಲರಹಟ್ಟಿಯ ಮಹಿಳೆಯರು ಊರಿನ ಹೊರ ಭಾಗದಲ್ಲಿ ಇರುವುದು ಕಂಡು ಬಂದಿದೆ, ಮೂವರು ಮಹಿಳೆಯರು ಮೌಢ್ಯ ಆಚರಣೆಗೆ ಒಳಗಾಗಿರುವ ದೃಶ್ಯ ಕಂಡು ಬಂದಿದ್ದು ಅವರಿಗೆ ಮತ್ತೆ ಬುದ್ಧಿ ಹೇಳಿ ಮನೆಗೆ ಕಳುಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಇಓ ಇಂತಹ ಮೂಢನಂಬಿಕೆಗಳಿಂದ ತಾವೆಲ್ಲರೂ ಹೊರ ಬರಬೇಕು, ಈ ರೀತಿಯ ಆಚರಣೆಗೆ ಕಡಿವಾಣ ಹಾಕಲೇಬೇಕಿದೆ, ಗ್ರಾಮಗಳಲ್ಲಿನ ಹಿರಿಯರು, ಪೂಜಾರಿಗಳು, ಯಜಮಾನರನ್ನು ಕರೆಸಿ ಚರ್ಚಿಸಿ ಈ ರೀತಿ ಮೂರು ದಿನ, ಐದು ದಿನ ಎಂದು ಹೊರಗೆ ಬಿಟ್ಟಿದ್ದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು, ಇದಕ್ಕೆ ಆಸ್ಪದ ಕೊಡದೆ ಇಂದಿನ ಕಾಲಕ್ಕೆ ಅನುಗುಣವಾಗಿ ದೇವರು, ಮೈಲಿಗೆ ಎಂಬ ನಂಬಿಕೆಯಿಂದ ಹೊರಗೆ ಬಂದು ಎಲ್ಲರಂತೆ ಜೀವನ ನಡೆಸುವಂತೆ ಮನವರಿಕೆ ಮಾಡಿಕೊಟ್ಟರು.

ಇಂತಹ ತಂತ್ರಜ್ಞಾನ ಕಾಲದಲ್ಲಿಯೂ ಕೆಲವು ಅನಿಷ್ಟ ಪದ್ಧತಿ ಆಚರಿಸುತ್ತಿರುವುದು ವಿಪರ್ಯಾಸದ ಸಂಗತಿ, ಇದಕ್ಕೆ ಪೂರಕವಾಗಿ ಹಿರಿಯರು, ಪೂಜಾರಿಗಳು ಹೆದರಿಸಿ ಮನೆಯಿಂದ ಹೊರಗೆ ಹಾಕಿ ಹಿಂದಿನ ಪದ್ಧತಿಯಂತೆ ನಡೆಸಿಕೊಳ್ಳುತ್ತಿರುವ ಬೆನ್ನಲ್ಲೇ ಇಂಥವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡರೆ ಮಾತ್ರ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಎಚ್ಚರಿಕೆ ಸಹ ನೀಡಿದರು.
ಈ ಸಂದರ್ಭದಲ್ಲಿ ಬಿಸಿಎಂ ಸಹಾಯಕ ನಿರ್ದೇಶಕಿ ಪವಿತ್ರ, ಪೊಲೀಸ್ ಸಿಬ್ಬಂದಿ ಹಾಜರಿದ್ದರು

Get real time updates directly on you device, subscribe now.

Comments are closed.

error: Content is protected !!