ಪತ್ರಕರ್ತರು ಕೌಶಲ್ಯ ಕರಗತ ಮಾಡಿಕೊಳ್ಳಲಿ

89

Get real time updates directly on you device, subscribe now.


ತುಮಕೂರು: ಅತ್ಯಂತ ಸವಾಲಿನ ಕ್ಷೇತ್ರವಾದ ಪತ್ರಿಕೋದ್ಯಮ ಬಯಸುವುದು ಸರ್ವತೋಮುಖ ಕೌಶಲಗಳನ್ನು, ಸಂದರ್ಭಗಳು ಬಯಸುವ ಎಲ್ಲಾ ಕೌಶಲ ಕರಗತ ಮಾಡಿಕೊಂಡಾಗ ಅವಕಾಶಗಳು ನಮ್ಮನ್ನು ಅರಸಿ ಬರುತ್ತವೆ. ಪದವಿ ಹಂತದಲ್ಲೇ ಗುರಿಯನ್ನು ನಿರ್ಧರಿಸಿ ಅದನ್ನು ಸಾಧಿಸುವ ಕಡೆಗೆ ಗಮನ ಹರಿಸಬೇಕು ಎಂದು ಬೆಂಗಳೂರಿನ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಲೋಕೇಶ್ ಕೋಡಗದಾಲ ಹೇಳಿದರು.
ತುಮಕೂರು ವಿಶ್ವ ವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಪಲ್ಲವ ಮತ್ತು ಟಿವಿ ವರದಿಗಾರಿಕೆಯ ಸವಾಲುಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪದವಿ, ಸ್ನಾತಕ ಪದವಿ ಕಲಿಕೆಯ ಹಂತದಲ್ಲೇ ಮುದ್ರಣ, ವಿದ್ಯುನ್ಮಾನ, ಡಿಜಿಟಲ್ ಮಾಧ್ಯಮ ಬಯಸುವ ಕೌಶಲ ಕರಗತ ಮಾಡಿಕೊಳ್ಳಬೇಕು, ವರದಿಗಾರರಾಗಿ, ನಿರೂಪಕರಾಗಿ, ವಿವಿಧ ಸುದ್ದಿ ವಿಭಾಗಗಳ ಮುಖ್ಯಸ್ಥರಾಗಿ, ಹೀಗೆ ಪತ್ರಿಕೋದ್ಯಮ ಕ್ಷೇತ್ರದ ಹಲವು ಜವಾಬ್ದಾರಿಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು, ಜನಸಾಮಾನ್ಯರಿಗೆ ಸುದ್ದಿ ಮುಟ್ಟಿಸಲು ಬೇಕಾದ ಸರಳ ಭಾಷೆ, ವಾಕ್ಯ ರಚನೆಯ ಅರಿವಿರಬೇಕು ಎಂದರು.

ದಿನಪತ್ರಿಕೆಗಳನ್ನು ಓದುವ ಅಭ್ಯಾಸ, ಬರವಣಿಗೆ, ಭಾಷಾಂತರ, ಮಾತಿನ ಸ್ಪಷ್ಟತೆ, ಪುಟ ವಿನ್ಯಾಸ, ಗ್ರಾಫಿಕ್ ಡಿಸೈನ್, ವೀಡಿಯೊ ಎಡಿಟಿಂಗ್, ಕಾಪಿ ಎಡಿಟಿಂಗ್, ಕ್ಯಾಮೆರಾ ಬಳಕೆ, ಪ್ರಚಲಿತ ವಿದ್ಯಾಮಾನದ ತಿಳುವಳಿಕೆ, ಮಾತುಗಾರಿಕೆ, ಪದ ಬಳಕೆ, ವಿಜ್ಞಾನ- ತಂತ್ರಜ್ಞಾನದ ಜ್ಞಾನ, ರಾಜಕೀಯ, ಪ್ರಾದೇಶಿಕ, ಕ್ರೈಂ, ಕ್ರೀಡೆ, ಎಲ್ಲಾ ವಿಚಾರವೂ ನಮ್ಮ ಬುದ್ಧಿಯೊಳಗೆ ವಿನಿಮಯವಾಗಿ, ಜನರ ನಾಡಿಮಿಡಿತ ಅರಿತು ಸುದ್ದಿಗಳನ್ನು ನೀಡಿದಾಗ ಮಾತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಫಲರಾಗಲು ಸಾಧ್ಯ ಎಂದು ತಿಳಿಸಿದರು.
ಸುದ್ದಿಯ ಮೂಲ, ಸಂವಹನ, ವಿಷಯ, ಇತಿಹಾಸದ ಬಗ್ಗೆ ಸ್ಪಷ್ಟತೆ ಇರಬೇಕು, ಟಿವಿ ಹಾಗೂ ಡಿಜಿಟಲ್ ಮಾಧ್ಯಮ ಬಯಸುವುದು ಸುದ್ದಿಯ ವೇಗವನ್ನು, ಫಲಶೃತಿಯಾಗುವಂತಹ ವರದಿಗಳನ್ನು ಕೊಡುವ ಕಾರ್ಯ ಪತ್ರಕರ್ತನದ್ದಾಗಬೇಕು, ಅಭಿವೃದ್ಧಿ ಪತ್ರಿಕೋದ್ಯಮ ವರದಿಗಳ ಪ್ರಭಾವ ಹೆಚ್ಚು, ಯಾವುದೇ ವರದಿ ಮಾಡುವ ಮುನ್ನ ವಿಷಯದ ಹಿನ್ನೆಲೆ ತಿಳಿದಿರಬೇಕು, ಮೇಕಿಂಗ್ ಆಫ್ ನ್ಯೂಸ್, ಬ್ರೇಕಿಂಗ್ ಆಫ್ ನ್ಯೂಸ್ ನ ರೂಪ, ಬಳಕೆ ತಿಳಿದ ಪತ್ರಕರ್ತ ಸಮಾಜದ ಧ್ವನಿಯಾಗುತ್ತಾನೆ ಎಂದು ಹೇಳಿದರು.
ಟಿವಿ ವರದಿಗಾರಿಕೆಯ ಸವಾಲುಗಳು ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ಸ್ವಾಗತ ಸಮಾರಂಭಗಳು ಬಾಂಧವ್ಯದ ಸಂಕೇತ, ವಿದ್ಯಾರ್ಥಿಗಳಲ್ಲಿ ಇರುವ ವಿಭಿನ್ನ ಕೌಶಲ ಹೊರತರುವ ಉದ್ದೇಶವಿದು, ಕೇಡನ್ನು ಬಯಸದ ಶಿಕ್ಷಣ ವಿದ್ಯಾರ್ಥಿಗಳಿಗೆ ಕಲಿಸಬೇಕು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪತ್ರಿಕಾ ಧರ್ಮ ಪಾಲಿಸಿದರೆ ಸಮಾಜದ ಅಭಿವೃದ್ಧಿ ಸದಾ ಎಂದರು.

ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ಪದ್ಮನಾಭ ಕೆ.ವಿ, ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹರೀಶ್ ಕುಮಾರ್.ಬಿ.ಸಿ, ಮನೋಜ್ ಕುಮಾರಿ.ಬಿ, ಕಮಲಮ್ಮ.ಎಸ್, ಸ್ನಾತಕೋತ್ತರ ವಿಭಾಗದ ಉಪನ್ಯಾಸಕ ಡಾ.ಪೃಥ್ವಿರಾಜ.ಟಿ, ಕೋಕಿಲ.ಎಂ.ಎಸ್, ವಿನಯ್ ಕುಮಾರ್.ಎಸ್.ಎಸ್. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!