ತುಮಕೂರು: ಜಿಲ್ಲೆಯ ರೈತರು ಹಾಗೂ ವಿದ್ಯುತ್ ಗುತ್ತಿಗೆದಾರರ ಕುಂದುಕೊರತೆ ಬಗೆಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ನೇತೃತ್ವದಲ್ಲಿ ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ನಗರದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಬಳಿ ಸೋಮವಾರ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಮಾತನಾಡಿ, ಅನುಮತಿ ಪಡೆದ ಗುತ್ತಿಗೆದಾರರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ, ಸರ್ಕಾರ ಹಾಗೂ ಇಂಧನ ಇಲಾಖೆಯು ವಿದ್ಯುತ್ ಗುತ್ತಿಗೆದಾರರ ನೆರವಿಗೆ ಬರಬೇಕು, ಇಂಧನ ಇಲಾಖೆ ಅಧಿಕಾರಿಗಳು ವಿದ್ಯುತ್ ಗುತ್ತಿಗೆದಾರರಿಗೆ ತೊಂದರೆ ಕೊಡುತ್ತಿದ್ದಾರೆ, ಲಂಚದ ಬೇಡಿಕೆ ಇಡುತ್ತಿದ್ದಾರೆ, ಗುತ್ತಿಗೆ ನಂಬಿಕೊಂಡು ಬದುಕುತ್ತಿರುವ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ, ನಮಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ಎಂದು ಹೇಳಿದರು.
ರೈತರ ನಿರಾವರಿ ಪಂಪ್ ಸೆಟ್ ಗಳಿಗೆ ತತ್ಕಾಲ್ ಸ್ಕೀಂನಲ್ಲಿ ಅನುದಾನ ಬಿಡುಗಡೆ ಮಾಡಬೇಕು, ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮ ಯೋಜನೆಗೆ ಮತ್ತೆ ಚಾಲನೆ ನೀಡಬೇಕು, ಒಂದು ಲಕ್ಷದಿಂದ ಐದು ಲಕ್ಷದ ವರೆಗಿನ ಕಾಮಗಾರಿ ಪೂರ್ಣ ಗುತ್ತಿಗೆ ಆಧಾರದ ಮೇಲೆ ತುಂಡು ಗುತ್ತಿಗೆಯಾಗಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಠಾಣಾದ ಹೊರಗೆ ನಿರ್ಮಿಸಿರುವ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಅವಕಾಶ ಕಲ್ಪಿಸಬೇಕು, ಅಕ್ರಮ ಸಕ್ರಮ, ಗಂಗಾ ಕಲ್ಯಾಣ, ಹೊಸ ಸಂಪರ್ಕ ಮತ್ತು ಮುರಿದ ಕಂಬಗಳ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು, ಕಳೆದ ಏಪ್ರಿಲ್ನಿಂದ ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳಿಗೂ ಅನುದಾನ ನೀಡಿಲ್ಲ, ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಕೆ.ಅಶೋಕ್ ಕುಮಾರ್ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಕುಂದು ಕೊರತೆ ನಿವಾರಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಇಂಧನ ಸಚಿವರಿಗೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ, ಹೀಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಇಲಾಖೆಯ ಉಗ್ರಾಣದಲ್ಲಿ ಲೈನ್ ಸಾಮಾಗ್ರಿಗಳು ಲಭ್ಯವಿರುವುದಿಲ್ಲ, ಕೂಡಲೇ ದಾಸ್ತಾನು ಮಾಡಬೇಕು, ಹಲವಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಖಾಧಿಕಾರಿಗಳು, ಸಹಾಯಕ ಇಂಜಿನಿಯರ್, ಪವರ್ ಮೆನ್ ಗಳು, ಮಾಪಕ ಓದುಗರ ವರ್ಗವಣೆಗೆ ಶಿಫಾರಸ್ಸು ಮಾಡಬೇಕು, ಲೈಟಿಂಗ್ ಮತ್ತು ಪವರ್ ಸಂಪರ್ಕಗಳಿಗೆ ಅನುದಾನ ಇಲ್ಲವೆಂದು ವಿದ್ಯುತ್ ಮಂಜೂರಾತಿ ನೀಡುತ್ತಿಲ್ಲ, ಕೂಡಲೇ ಅನುದಾನ ನೀಡಬೇಕು, ರೈತರ ಐಪಿ ಪಂಪ್ ಸೆಟ್ ಗಳಿಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸೌಕರ್ಯ ಮಾಡಿಕೊಳ್ಳುವ ಕಾಮಗಾರಿಗಳಿಗೆ ಶೇಕಡ 5 ರಷ್ಟು ಮೇಲ್ವಿಚಾರಣಾ ಶುಲ್ಕ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷರಾದ ಬಸವರಾಜಪ್ಪ, ಮೆಹಬೂಬ್ ಖಾನ್, ಕಾರ್ಯದರ್ಶಿ ಜಿ.ನಾಗರಜು, ಜಂಟಿ ಕಾರ್ಯದರ್ಶಿ ಬಿ.ಬಿ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಬಿ.ಹೆಚ್.ಪ್ರಕಾಶ್, ಕೋಶಾಧ್ಯಕ್ಷ ಬಿ.ಕೆ.ಶಿವಕುಮಾರ್, ಸಿದ್ದಲಿಂಗಸ್ವಾಮಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಜಿಲ್ಲೆಯ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Comments are closed.