ಬಸ್ ನಿಲ್ಲಿಸದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಯತ್ನ

157

Get real time updates directly on you device, subscribe now.


ಕುಣಿಗಲ್: ಬಸ್ ಚಾಲಕ ಬಸ್ ನಿಲ್ಲಿಸಲಿಲ್ಲ ಎಂದು ಪ್ರಯಾಣಿಕರ ಕಡೆಯವರು ಚಾಲಕನ ಮೇಲೆ ಹಲ್ಲೆಗೆ ಮುಂದಾದ್ದರಿಂದ ಪಟ್ಟಣದ ಸರ್ಕಲ್ ನಲ್ಲಿ ಸೋಮವಾರ ಬೆಳಗ್ಗೆ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದ ಮೂಲಕ ದಿನಾಲೂ ಅಗತ್ಯ ಕೆಲಸ ಕಾರ್ಯಗಳಿಗೆ ಸಾವಿರಾರು ಮಂದಿ ಬೆಂಗಳೂರಿಗೆ ಹೋಗುತ್ತಾರೆ, ಸೋಮವಾರ ಮಾತ್ರ ಹೆಚ್ಚಿನ ಜನದಟ್ಟಣೆ ಇರುತ್ತದೆ, ಇದರಿಂದಾಗಿ ಪಟ್ಟಣದಿಂದ ಹೊರಡುವ ಪ್ರಯಾಣಿಕರು ಪುರಸಭೆ ಬಸ್ ನಿಲ್ದಾಣದ ಬಳಿ ಇರುವ ಸಾರಿಗೆ ಸಂಸ್ಥೆ ಘಟಕದ ಬಳಿಯೆ ತೆರಳಿ ಹತ್ತಲು ಮುಂದಾಗುತ್ತಾರೆ, ಘಟಕದ ಅಧಿಕಾರಿಗಳು ಈ ನಿಟ್ಟಿನಲ್ಲಿ ಚಾಲಕರಿಗೆ ಎಚ್ಚರಿಕೆ ನೀಡಿದ್ದರಿಂದ ಸೋಮವಾರ ಬಸ್ ಚಾಲಕ ಘಟಕದ ಬಳಿ ನಿಲ್ಲಿಸದೆ ವೇಗವಾಗಿ ಸರ್ಕಲ್ ನ ಬಸ್ ನಿಲ್ದಾಣಕ್ಕೆ ಆಗಮಿಸಿದ, ಚಲಿಸುವ ಬಸ್ಸನ್ನು ಅಡ್ಡ ಹಾಕಲು ಹಾಗೂ ಕೆಲವರು ಚಲಿಸುವ ಬಸಿನಲ್ಲೆ ಸೀಟ್ ಹಿಡಿಯಲು ಯತ್ನಾಸಿದಾಗ ಕೆಲವರು ಬಿದ್ದು ಗಾಯಗೊಂಡರು, ಇದಕ್ಕೆ ಆಕ್ರೋಶಗೊಂಡ ಪ್ರಯಾಣಿಕರ ಕಡೆಯವರು ಸರ್ಕಲ್ ಬಸ್ ನಿಲ್ದಾಣಕ್ಕೆ ನಿಂತಾಗ ಬಸ್ ನ ಚಾಲಕನ ಮೇಲೆ ಹಲ್ಲೆಗೆ ಮುಂದಾದರಲ್ಲದೆ ಬಸ್ ನ ಕೈ ಕಿತ್ತು ಬಿಸಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಮುಗಿಬಿದ್ದಾಗ ಹತಾಶಗೊಂಡ ಬಸ್ ಚಾಲಕ ರಂಗಸ್ವಾಮಿ, ನಾವು ಸಹ ಸಾರ್ವಜನಿಕರ ಸೇವೆಗೆ ಇರುವುದು, ಡಿಪೋ ಬಳಿ ನಿಲ್ಲಿಸಿದರೆ ಅಧಿಕಾರಿಗಳ ಕಾಟ, ನಿಲ್ಲಿಸದೆ ಇದ್ದರೆ ಪ್ರಯಾಣಿಕರು, ನಾಗರಿಕರು ಹಲ್ಲೆಗೆ ಮುಂದಾಗುತ್ತಾರೆ, ಹೀಗಾದರೆ ಏನು ಮಾಡೋದು, ಬೇಕಾದರೆ ನಮ್ಮನ್ನು ಹೊಡೆದು ಬಿಸಾಕಿ ಎಂದು ವಾಹನದಿಂದ ಇಳಿದು ಅಳಲು ತೋಡಿಕೊಂಡರು, ಸರ್ಕಲ್ ನಲ್ಲಿ ಜನದಟ್ಟಣೆ ಹೆಚ್ಚಾಗಿ ಗೊಂದಲದ ವಾತವರಣ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿದ್ದು ಬಸ್ ನ ಕೀಲಿ ಕೈ ಸಿಗದೆ ವಾಹನವನ್ನು ತಳ್ಳಿ ಒಂದು ಬದಿಗೆ ನಿಲ್ಲಿಸಲು ಮುಂದಾದಾಗ ಬಸ್ ನ ಒಳಗೆ ಬಿದ್ದಿದ್ದ ಕೀಲಿಕೈ ಸಿಕ್ಕಿದ ನಂತರ ಬಸ್ ಸಂಚಾರ ಎಂದಿನಂತೆ ಮುಂದುವರೆಯಿತು.

ಸಾರಿಗೆ ಬಸ್ ಸಂಚಾರದ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ ನಾಗರಿಕ ಸುರೇಶ್, ಸೋಮವಾರ ಹೆಚ್ಚಿನ ಜನಸಂದಣಿ ಇದ್ದೂ ಪ್ರಯಾಣಿಕರ ಸಂಖ್ಯೆಗೆ ಬಸ್ಸು ಸಂಚಾರ ಆರಂಭಿಸದ ಸರ್ಕಾರದ ಅವೈಜ್ಞಾನಿಕ ಕ್ರಮದಿಂದಾಗಿ ಪ್ರಯಾಣಿಕರು, ಸಾರಿಗೆ ಸಂಸ್ಥೆ ಸಿಬ್ಬಂದಿ ಮಧ್ಯೆ ದಿನಾಲೂ ಸಂಘರ್ಷದ ವಾತಾವರಣ ಉಂಟಾಗಿದೆ, ಇನ್ನಾದರೂ ಸರ್ಕಾರ ಎಚ್ಚೆತ್ತು ಈ ಮಾರ್ಗದಲ್ಲಿ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಮಾಡುವ ಮೂಲಕ ಸಂಘರ್ಷಕ್ಕೆ ಇತಿಶ್ರೀ ಹಾಡಬೇಕೆಂದಿದ್ದಾರೆ

Get real time updates directly on you device, subscribe now.

Comments are closed.

error: Content is protected !!