ಸಮರ್ಪಕವಾಗಿ ಕುಡಿಯುವ ನೀರು ಒದಗಿಸಿ: ಡೀಸಿ

81

Get real time updates directly on you device, subscribe now.


ತುಮಕೂರು: ಜಿಲ್ಲೆಯ ಯಾವುದೇ ತಾಲ್ಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಲ್ಲಾ ತಹಶೀಲ್ದಾರ್ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿ, ಮುಖ್ಯಮಂತ್ರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕೃತಿಯಾಗಿರುವ ಎಲ್ಲಾ ಅರ್ಜಿಗಳನ್ನು ತಮ್ಮ ಬಳಿ ಉಳಿಸಿಕೊಳ್ಳದೆ ತ್ವರಿತವಾಗಿ ವಿಲೇವಾರಿ ಮಾಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕುಣಿಗಲ್ ಮತ್ತು ಕೊರಟಗೆರೆಯಲ್ಲಿ ನಡೆದ ಜಿಲ್ಲಾ ಜನತಾ ದರ್ಶನದಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ವಿಲೇವಾರಿ ಮಾಡಬೇಕು, ವಿಲೇವಾರಿ ಮಾಡಿರುವ ಅರ್ಜಿಗಳು ಯಾವ ಹಂತದಲ್ಲಿವೆ ಎಂಬುವುದನ್ನು ಉಪ ವಿಭಾಗಾಧಿಕಾರಿಗಳು ಪರಿಶೀಲಿಸಬೇಕೆಂದು ಹೇಳಿದರು.

ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜಿಲ್ಲೆಯ 1024 ಎಕರೆ ಭೂಮಿಯನ್ನು ಆಶ್ರಯ ಯೋಜನೆಗೆ ಹಸ್ತಾಂತರ ಮಾಡಲಾಗಿದ್ದು, ಆಯಾ ತಾಲ್ಲೂಕಿನ ಇಓಗಳು ತಹಶೀಲ್ದಾರ್ ಗಳಿಂದ ಮಾಹಿತಿ ಪಡೆದುಕೊಂಡು ನಗರ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಂಡು ತದ ನಂತರ ಬಡವಾಣೆಗಳನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.
ಭೂದಾಖಲೆಗಳ ಸಿಬ್ಬಂದಿಗೆ ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ನುರಿತ ಅಧಿಕಾರಿಗಳಿಂದ ತರಬೇತಿ ನೀಡಲಾಗಿರುತ್ತದೆ, ಕಚೇರಿಗೆ ನೀಡಿರುವ ಕಂಪ್ಯೂಟರ್ ಮತ್ತು ಸ್ಕ್ಯಾನರ್ ಗಳನ್ನು ಬಳಸಿಕೊಂಡು ಎಲ್ಲಾ ಕಡತಗಳನ್ನು ಸ್ಕ್ಯಾನ್ ಮಾಡಬೇಕು, ಕೆಲಸ ಮಾಡಲು ಸಿಬ್ಬಂದಿ ಕೊರತೆಯಿರುವ ಕಡೆ ಆಯಾ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕೆಂದು ತಹಶೀಲ್ದಾರ್ ಗಳಿಗೆ ಹೇಳಿದರು.

ಸಕಾಲದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಡಿಜಿಟಲ್ ಸಹಿ ಅವಧಿ ಮುಗಿದಿರುವ ಉಪ ತಹಶೀಲ್ದಾರ್ ಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ತ್ವರಿತವಾಗಿ ಡಿಜಿಟಲ್ ಸಹಿ ಪಡೆಯಬೇಕೆಂದು ತಿಳಿಸಿದರು.
ಆಗ್ನೇಯ ಶಿಕ್ಷಕರ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಮತದಾರರ ಮಾಹಿತಿಯನ್ನು ಎಲ್ಲಾ ತಹಶೀಲ್ದಾರ್ ಗಳು ಸಹಿ ಮಾಡಿರುವ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು, ಎಲ್ಲಾ ಶಿಕ್ಷಕ ಮತದಾರರ ಮಾಹಿತಿಯನ್ನು ಕಡ್ಡಾಯವಾಗಿ ಡಿಜಿಟಲೀಕರಣ ಮಾಡಬೇಕೆಂದು ತಿಳಿಸಿದರು.

ಡಿಸೆಂಬರ್ 16 ರಂದು ಶಿರಾ ತಾಲ್ಲೂಕಿನಲ್ಲಿ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಕುಂದು ಕೊರತೆ ಸಲ್ಲಿಸಲು ಇಲಾಖಾವಾರು ಕೌಂಟರ್ ಗಳನ್ನು ತೆರೆಯುವುದಕ್ಕೆ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಿರಾ ತಹಶೀಲ್ದಾರ್ ಗೆ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!