ಸ್ಥಿತಿವಂತರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆ

66

Get real time updates directly on you device, subscribe now.


ತುಮಕೂರು: ಬಲಾಢ್ಯರು ಎಲ್ಲಾ ರೀತಿಯ ಅನುಕೂಲಸ್ಥರಿಂದಲೇ ಮಾನವ ಹಕ್ಕುಗಳ ಹರಣ ಹೆಚ್ಚು ಹೆಚ್ಚು ನಡೆಯುತ್ತಾ ಬಂದಿದೆ ಎಂದು ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ತುಮಕೂರು ನಗರ ಸಾಂತ್ವನ ಕೇಂದ್ರ, ಜೆ.ಪಿ.ಪ್ರೌಢಶಾಲೆ ಸಹಯೋಗದಲ್ಲಿ ನಗರದ ಶಾರದಾದೇವಿ ನಗರದಲ್ಲಿರುವ ಜೆ.ಪಿ.ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ, ಹೆಣ್ಣು ಮಕ್ಕಳ ರಕ್ಷಣೆ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಥಿತಿವಂತರಿಂದಲೇ ಮಾನವ ಹಕ್ಕುಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ದುರ್ಬಲರು, ಅಶಕ್ತರ ರಕ್ಷಣೆಗಾಗಿಯೇ ಕಾನೂನು ರಚನೆಯಾಗಿವೆ, ಮಾನವ ಹಕ್ಕುಗಳ ಮೇಲೆ ದೌರ್ಜನ್ಯ ಉಂಟಾದಾಗ ಈ ಹಕ್ಕುಗಳ ರಕ್ಷಣೆ ಪಡೆಯಲು ಮುಂದಾಗಬೇಕು ಎಂದರು.

ಲೇಖಕಿ ಬಾ.ಹ.ರಮಾಕುಮಾರಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಗು ಹುಟ್ಟಿದಾಗಿನಿಂದಲೇ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ, ಹೆಣ್ಣು ಮಗು ಹುಟ್ಟಿದರೆ ಭ್ರೂಣ ಹತ್ಯೆ ಮಾಡುವ ನೀಚ ಪದ್ಧತಿ ಇನ್ನೂ ನಮ್ಮ ಸಮಾಜದಲ್ಲಿ ಇರುವುದು ದುರಂತ, ಈ ಕಾರಣಕ್ಕಾಗಿಯೇ ಕಾನೂನು ಬಲಿಷ್ಠವಾಗಿಸಲಾಗಿದೆ ಎಂದರು.

ಕೇವಲ ಬದುಕುವುದು ಒಂದು ಹಕ್ಕಲ್ಲ, ಘನತೆ, ಗೌರವದಿಂದ ಬದುಕುವ ವಾತಾವರಣ ನಾವು ನಿರ್ಮಿಸಬೇಕು, ತಾರತಮ್ಯ ರಹಿತ ಸಮಾಜ ನಿರ್ಮಾಣವಾಗಬೇಕು, ಆದರೆ ನಮ್ಮ ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಇಂದಿಗೂ ಮುಂದುವರೆದಿದೆ, ಇದನ್ನು ನಿವಾರಣೆ ಮಾಡುವ ಸಲುವಾಗಿಯೇ ಮಕ್ಕಳಿಗೆ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಕೆಲವು ಯೋಜನೆ ರೂಪಿಸಲಾಗಿದೆ, ಪೌಷ್ಠಿಕ ಆಹಾರ, ಮಧ್ಯಾಹ್ನದ ಬಿಸಿಯೂಟ ಇಂತಹ ಯೋಜನೆಗಳಿಂದ ಬಂದಿರುವುದು ಮಾನವ ಹಕ್ಕುಗಳ ಪರಿಕಲ್ಪನೆಯಿಂದ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಸಾಕಷ್ಟಿದ್ದು, ಇಂತಹ ಅಸಮಾನತೆಯೇ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ, ಆದರೆ ಶಾಲಾ ಕಾಲೇಜುಗಳಲ್ಲಿ ಇವೆಲ್ಲವನ್ನೂ ಮೀರಿದ ತಾರತಮ್ಯ ರಹಿತ ವಾತಾವರಣ ನಿರ್ಮಾಣವಾಗಲು ಕಾರಣವಾಗಿರುವುದು ನಮ್ಮ ಸಂವಿಧಾನ, ಮಾನವ ಹಕ್ಕುಗಳ ಪರಿಕಲ್ಪನೆಯಿಂದ ಎಂದರು.
ಇತ್ತೀಚಿನ ದಿನಗಳಲ್ಲಿ ಪೋಕ್ಸೋ ಪ್ರಕರಣ, ಬಾಲ್ಯ ವಿವಾಹದ ಪ್ರಕರಣ ಹೆಚ್ಚುತ್ತಿವೆ, ಇದಕ್ಕೆ ಸಾಮಾಜಿಕ ಜಾಲತಾಣಗಳು, ಮೊಬೈಲ್ ಗಳು ಪ್ರೇರಣೆ ನೀಡುತ್ತಿದ್ದು, ಕಲಿಯುವ ಹಂತದಲ್ಲಿ ಬದುಕನ್ನು ಛಿದ್ರ ಮಾಡಿಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಡಿ.ಜಿ.ಅನಂತಮೂರ್ತಿ ಮಾತನಾಡಿ, ಬಡವರು ಮತ್ತು ದುರ್ಬಲರ ಬಗ್ಗೆ ಇರುವ ಸಾಮಾಜಿಕ ಅಸಮಾನತೆಗಳು ನಿವಾರಣೆಯಾಗಬೇಕು, ಜಾತಿ ಮತ್ತು ಧರ್ಮ ಕುರಿತ ಚರ್ಚೆಗಳು ಹೆಚ್ಚು ವಿಜೃಂಭಣೆ ಪಡೆಯುತ್ತವೆ, ಇಂತಹ ಕ್ಷುಲ್ಲಕ ವಿಷಯಗಳಿಗೆ ಗಮನ ಹರಿಸದೆ ಎಲ್ಲರ ಹಕ್ಕುಗಳನ್ನು ಗೌರವಿಸುವ ಕಡೆಗೆ ಎಲ್ಲರೂ ಗಮನ ಹರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆ ಪದಾಧಿಕಾರಿಗಳಾದ ರಾಜೇಶ್ವರಿ ಚಂದ್ರಶೇಖರ್, ಗಂಗಲಕ್ಷ್ಮಿ, ಪಾರ್ವತಮ್ಮ, ಲೇಖಕ ಅಬ್ಬಿನಹೊಳೆ ಸುರೇಶ್, ಶಿಕ್ಷಕ ನಾಗೇಂದ್ರಪ್ಪ, ಕುಮಾರ ನಾಯಕ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!