ಹೈಕಮಾಂಡ್ ಗೆ ನನ್ನ ನಿರ್ಧಾರ ತಿಳಿಸುವೆ: ಸೋಮಣ್ಣ

55

Get real time updates directly on you device, subscribe now.


ತುಮಕೂರು: ಪಕ್ಷಗಳಲ್ಲಿ ವೈಮನಸ್ಸು ಸಹಜ, ಆದರೆ ವೈಯಕ್ತಿಕ ಜೀವನದಲ್ಲಿ ಸೋಮಣ್ಣನಿಂದ ಮೋಸ ಹೋದ ಎಂಬುವವರು ಒಬ್ಬರು ಇಲ್ಲ, ನಾನು ಮಾಡಿದ ಕೆಲಸಗಳು ನನ್ನ ಕೈ ಹಿಡಿಯಲಿವೆ, ಶೀಘ್ರವೇ ಬಿಜೆಪಿ ಹೈಕಮಾಂಡ್ ಆಹ್ವಾನ ಮಾಡಿದರೆ ದೆಹಲಿಗೆ ತೆರಳಿ ನನ್ನ ನಿರ್ಧಾರ ತಿಳಿಸಲಿದ್ದೇನೆ ಎಂದು ಹಿರಿಯ ಮುಖಂಡ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದ ಹನುಮಂತಪುರದ ಶ್ರೀಕೋಟೆ ಕೋಲ್ಲಾಪುರದಮ್ಮ ದೇವಾಲಯ ಸಮಿತಿಯಿಂದ ಕಾರ್ತಿಕ ಮಾಸದ ಕೊನೆಯ ದಿನ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಮೂರು ರಾಜ್ಯಗಳ ಚುನಾವಣೆ, ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಹೋಗಲು ಆಗಿರಲಿಲ್ಲ, ಮತ್ತೊಮ್ಮೆ ಕರೆ ಬಂದರೆ ದೆಹಲಿಗೆ ತೆರಳಿ ನನ್ನ ನಿರ್ಧಾರ ತಿಳಿಸಲಿದ್ದೇನೆ, ನಂತರ ಹಿರಿಯರೊಂದಿಗೆ ಮಾತನಾಡಿ, ಜನತೆಯೊಂದಿಗೆ ನನ್ನ ಅಭಿಪ್ರಾಯ ಹಂಚಿ ಕೊಳ್ಳಲಿದ್ದೇನೆ ಎಂದರು.

ನಾನು ಬೆಂಗಳೂರಿಗೆ 1969- 70ರಲ್ಲಿ ಬಂದಾಗ ನನಗೆ ಹತ್ತಾರುವರ್ಷಗಳ ಕಾಲ ಆಶ್ರಯ ನೀಡಿದ್ದು ತಿಗಳ ಸಮುದಾಯ, ಇಂದಿಗೂ ನನ್ನ ಅವರ ನಡುವೆ ಒಳ್ಳೆಯ ಸಂಬಂಧವಿದೆ, ತಮಗಿರುವ ಒಂದು ಎಕರೆ, ಅರ್ಧ ಎಕರೆ ಭೂಮಿಯಲ್ಲಿಯೇ ಬೆವರು ಸುರಿಸಿ ದುಡಿದು ಬದುಕುವ ಶ್ರಮಜೀವಿ ಸಮುದಾಯ, ಈ ದೇವಾಲಯ ನೋಡಿದರೆ ನನಗೆ ಆನಂದ ಆಗುತ್ತದೆ, ತುಮಕೂರಿನ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ ರಾಜಕಾರಣಕ್ಕೆ ಬರುವ ಮುಂಚಿನಿಂದಲೂ ನನಗೆ ಪರಿಚಯ, ಸಿದ್ದಗಂಗಾ ಮಠದ ಹಿರಿಯ ಶ್ರೀಗಳ ದಿಸೆಯಿಂದ ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ, ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟುತಿದ್ದ ಶ್ರೀಗಳ ಮಾರ್ಗದರ್ಶನದಲ್ಲಿ ಹಲವಾರು ಧಾರ್ಮಿಕ ಕೆಲಸ ಮಾಡಿದ್ದೇನೆ ಎಂದು ಗೌರವದಿಂದ ನುಡಿದರು.
ಕಾರ್ತಿಕ ಮಾಸ ಶ್ರೇಷ್ಠವಾದ ಮಾಸ, ಒಂದರಿಂದ ಮತ್ತೊಂದು ದೀಪ ಹತ್ತಿಸುವ ಮೂಲಕ ನಮ್ಮಲ್ಲಿರುವ ದ್ವೇಷ, ಅಸೂಯೆ ಹೋಗಲಾಡಿಸಲು ಒಳ್ಳೆಯ ಮಾರ್ಗ, ಕೋಟೆ ಕೊಲ್ಲಾಪುರದಮ್ಮ ದೇವಾಲಯದಲ್ಲಿ ಲಕ್ಷ ದೀಪೋತ್ಸವದ ಜೊತೆಗೆ, ಸಹ ಪಂಕ್ತಿ ಭೋಜನ ಸಹ ಬಹಳ ಪ್ರಸಿದ್ದಿ ಪಡೆದಿದೆ, ಈ ಕಾರ್ಯಕ್ರಮದಲ್ಲಿ ಹಿರಿಯರು, ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ನೋಡಿದರೆ, ನಿಮ್ಮಂದ ಕಲಿಯುವಂತಹದ್ದು ಬಹಳಷ್ಟಿದೆ ಎಂದರು.

ರಾಜಕಾರಣ ಎಲ್ಲಿ ಹೇಗೆ ಎಂಬುದು ತೀರ್ಮಾನವಾಗಿಲ್ಲ.1999ರಲ್ಲಿ ಬೆಂಗಳೂರು ನಗರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿಂತಾಗ ಕೆಲವರು ನಿಲ್ಲುವುದು ಬೇಡ ಎಂದಿದ್ದರು, ಆದರೆ ಸಿದ್ದಗಂಗಾ ಶ್ರೀಗಳು ಮತ್ತು ಆದಿಚುಂಚನಗಿರಿ ಶ್ರೀಗಳು ನೀನು ಮಾಡಿರುವ ಕೆಲಸಗಳಿಗೆ ಇದೊಂದು ಪರೀಕ್ಷೆ, ಸ್ಪರ್ಧೆ ಮಾಡು ಎಂದು ಆಶೀರ್ವಾದ ಮಾಡಿದ್ದರು, ಕಾಂಗ್ರೆಸ್ ನ ಪಾಂಚಜನ್ಯ ಯಾತ್ರೆಯ ಅಲೆಯ ನಡುವೆಯೂ 36 ಸಾವಿರ ಅಂತರದಿಂದ ಗೆಲುವಾಯಿತು, ಕಾಲ ಎಲ್ಲವನ್ನು ತೀರ್ಮಾನಿಸಲಿದೆ ಎಂದರು.

ದೇಶಕ್ಕೆ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ, ಹಾಗಾಗಿ ನಾನು ಯಾರ ಒತ್ತಡಕ್ಕೂ ಮಣಿಯಲ್ಲ, 6-7 ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ, ದೆಹಲಿಗೆ ಹೋಗಿ ಬಂದ ನಂತರ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ವಿ.ಸೋಮಣ್ಣ ನುಡಿದರು.

ತಿಗಳ ಸಮುದಾಯದ ಯಜಮಾನರಾದ ಹನುಮಂತರಾಜು, ಅಗ್ನಿ ತಿಗಳ ಜನಾಂಗದ ಅಧ್ಯಕ್ಷ ಡಿ.ಕುಂಬಿ ನರಸಯ್ಯ, ಉಪಾಧ್ಯಕ್ಷ ಟಿ.ಎಲ್.ಕುಂಭಯ್ಯ, ಕಾರ್ಯದರ್ಶಿ ಎಸ್.ಶಿವಣ್ಣ, ಉಪ ಮೇಯರ್ ಟಿ.ಕೆ. ನರಸಿಂಹ ಮೂರ್ತಿ, ಪಾಲಿಕೆ ಸದಸ್ಯ ಎ.ಶ್ರೀನಿವಾಸ್, ರವೀಶ್ ಜಹಾಂಗೀರ್, ರಕ್ಷಿತ, ಸತ್ಯಮಂಗಲ ಜಗದೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!