ಕಸ ಗುಡಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವೆ ಖಾಯಂಗೆ ಪಟ್ಟು- ಖ್ಯಾರೆ ಎನ್ನದ ಸರ್ಕಾರದ ವಿರುದ್ಧ ಕಿಡಿ

62

Get real time updates directly on you device, subscribe now.


ತುಮಕೂರು: ಸೇವೆ ಖಾಯಂ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಪೊರಕೆ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ಸ್ವಚ್ಛಗೊಳಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿದ್ದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪೊರಕೆ ಹಿಡಿದು ಸರ್ಕಾರಿ ಕಚೇರಿಯ ಕಸ ಗುಡಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಅತಿಥಿ ಉಪನ್ಯಾಸಕರು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್. ಮಾತನಾಡಿ, 20 ದಿನಗಳಿಂದ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ಬೀದಿ ಬದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಸ್ಪಂದಿಸದೆ, ವಿದ್ಯಾರ್ಥಿಗಳಿಗೂ ಅನ್ಯಾಯ ಮಾಡುತ್ತಾ, ನಮ್ಮ ನ್ಯಾಯಯುತ ಧ್ವನಿಗೂ ಅನ್ಯಾಯವೆಸಗುತ್ತಿದೆ ಸರ್ಕಾರ ಕಚೇರಿಯ ಸ್ವಚ್ಛ ಮಾಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದರು.
ಹತ್ತಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ್ದೇವೆ, ಆದರೆ ನಮ್ಮ ಜೀವನಕ್ಕೊಂದು ಭದ್ರತೆ ಇಲ್ಲದಂತಾಗಿ, ನಮ್ಮ ಭವಿಷ್ಯವೇ ಮಂಕು ಕವಿದೆ, ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ, ಆದ್ದರಿಂದ ಕೂಡಲೇ ಖಾಯಾಮಾತಿಗೆ ಕ್ರಮ ಕೈಗೊಳ್ಳಬೇಕು, ಅತಿಥಿ ಉಪನ್ಯಾಸಕರ ಗೈರು ಹಾಜರಾಗುತ್ತಿರುವುದರಿಂದ ರಾಜ್ಯಾದ್ಯಂತ ಓದುತ್ತಿರುವ ಲಕ್ಷಾಂತರ ಮಕ್ಕಳಿಗೆ ತರಗತಿಗಳು ನಡೆಯುತ್ತಿಲ್ಲ, ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನಡೆಯಾಗುತ್ತಿದೆ, ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇರೆ ಉದ್ಯೋಗಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ, ಸರ್ಕಾರಿ ನೇಮಕಾತಿಗೆ ನಿಗದಿ ಪಡಿಸಿದ ವಯೋಮಿತಿ ಮೀರಿರುವುದರಿಂದ ಖಾಯಂ ಮಾಡಬೇಕೆಂದು ಒತ್ತಾಯಿಸಿದರು.

ಅತಿಥಿ ಉಪನ್ಯಾಸಕಿ ಡಾ.ಜಾಲಜಾಕ್ಷಿ ಮಾತನಾಡಿ, ಪಂಜಾಬ್, ತೆಲಂಗಾಣ, ತಮಿಳುನಾಡು, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದ್ದು ರಾಜ್ಯ ಸರ್ಕಾರ ನಮ್ಮನ್ನು ಖಾಯಂ ಮಾಡಿ ಆದೇಶ ಹೊರಡಿಸಿದರೆ ನಮಗೆ ಕೊಡಬೇಕಾದ ವೇತನವನ್ನು ಯುಜಿಸಿಯೇ ಬರಿಸುತ್ತದೆ, ರಾಜ್ಯ ಸರ್ಕಾರ ಕೇವಲ ಶೇ.25 ರಷ್ಟು ವೇತನ ಮಾತ್ರ ಕೊಡಬೇಕಾಗುತ್ತದೆ, ಆದ್ದರಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ, ಸಿದ್ದರಾಮಯ್ಯ ಅವರು ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭಾಗ್ಯ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಅಂಭಿಕಾ.ಕೆ.ಆರ್, ಸವಿತ, ವಿನೂತಾ, ಡಾ.ಶಿವಣ್ಣ ತಿಮ್ಮಲಾಪುರ, ಡಾ.ಮಲ್ಲಿಕಾರ್ಜನಯ್ಯ.ಎಂ.ಟಿ, ಶಂಕರ್ ಹಾರೋಗೆರೆ, ಗಿರೀಶ್, ನಟರಾಜು, ಶಶಿಧರ್, ಮಾದೇವಯ್ಯ, ವೇದಮೂರ್ತಿ, ಕಿರಣ್ ಕುಮಾರ್, ಜಯರಾಮು, ನಟರಾಜು, ಶಿಲ್ಪ, ಶ್ವೇತ, ನಾಗೇಂದ್ರ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!