ಎಲ್ಲರ ಮೆಚ್ಚುಗೆ ಗಳಿಸಿದ ಮಕ್ಕಳ ಸಂತೆ

90

Get real time updates directly on you device, subscribe now.


ತುಮಕೂರು: ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಸಂತೆ ಮೇಳದಲ್ಲಿ ಹಣ್ಣು, ತರಕಾರಿ, ಹೂವು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಂಭ್ರಮಿಸಿದರು.
ಪುಟ್ಟಸ್ವಾಮಯ್ಯನ ಪಾಳ್ಯ ಶಾಲೆಯಿಂದ ಬುಧವಾರ ನಡೆದ ಮಕ್ಕಳ ಸಂತೆಯನ್ನು ನಗರಪಾಲಿಕೆ ಉಪ ಮೇಯರ್ ಟಿ.ಕೆ.ನರಸಿಂಹ ಮೂರ್ತಿ ಉದ್ಘಾಟಿಸಿ, ಮಕ್ಕಳಲ್ಲಿ ವ್ಯವಹಾರ ಪ್ರಜ್ಞೆ ಬೆಳೆಯಬೇಕು ಎನ್ನುವ ಕಾರಣಕ್ಕೆ ಇಲಾಖೆ ಶಾಲೆಗಳಲ್ಲಿ ಮಕ್ಕಳ ಸಂತೆ ಆಯೋಜಿಸುತ್ತದೆ, ದೈನಂದಿನ ವ್ಯಾಪಾರ, ವ್ಯವಹಾರದ ಬಗ್ಗೆ ಮಕ್ಕಳು ಜ್ಞಾನ ಬೆಳೆಸಿಕೊಂಡರೆ ಮುಂದಿನ ಬದುಕಿನಲ್ಲಿ ವ್ಯಾವಹಾರಿಕ ಶಿಸ್ತು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪುಟ್ಟಸ್ವಾಮಯ್ಯನ ಪಾಳ್ಯದ ಸರ್ಕಾರಿ ಶಾಲೆಯ ಸಮಸ್ಯೆಗಳ ಬಗ್ಗೆ ಶಾಲಾಭಿವೃದ್ಧಿ ಮಂಡಲಿಯವರು ಉಪ ಮೇಯರ್ ಗಮನಕ್ಕೆ ತಂದಾಗ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಪಾಲಿಕೆಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು, ಜೊತೆಗೆ ಗ್ರಾಮಸ್ಥರೂ ಕೈ ಜೋಡಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೋರಿದರು.

ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್ ಮಾತನಾಡಿ, ನಗರದ ಹೊರ ವಲಯದಲ್ಲಿರುವ ಪುಟ್ಟಸ್ವಾಮಯ್ಯನ ಪಾಳ್ಯ ಶಾಲೆಯಲ್ಲಿ ರೈತರು, ಕೃಷಿ ಕಾರ್ಮಿಕರ ಮಕ್ಕಳು ಕಲಿಯುತ್ತಿದ್ದಾರೆ, ಇಂತಹ ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು, ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕಲಿಯಲು ಪೋಷಕರ ಮನವೊಲಿಸಿ ಶಾಲೆ ಉಳಿಸಲು ಎಸ್ಡಿಎಂಸಿಯವರು ಸಹಕರಿಸಬೇಕು ಎಂದು ಹೇಳಿದರು.

ವ್ಯವಹಾರ, ದುಡಿಮೆಯ ಬೆಲೆ ತಿಳಿಯಲೆಂದು ಶಾಲೆಯಲ್ಲಿ ಸಂತೆ ಮೇಳ ಮಾಡಲಾಗುತ್ತದೆ, ಮಕ್ಕಳ ಅದರ ಅನುಭವ ಪಡೆದು ಅದರ ಮಹತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ರಾಜಣ್ಣ, ವಿರೂಪಾಕ್ಷಯ್ಯ, ಅಣೆಕಾರ್ ತುಮಕೂರಯ್ಯ, ತೋಟದ ನರಸಿಂಹಮೂರ್ತಿ, ಕೆ.ಕುಂಭಯ್ಯ, ಟಿ.ಎನ್.ಕುಂಭಯ್ಯ, ಜಯಲಕ್ಷ್ಮಮ್ಮ, ಕೇಬಲ್ ಕುಮಾರ್, ಕೃಷ್ಣಪ್ಪ, ಲಕ್ಷ್ಮಯ್ಯ ಸೇರಿದಂತೆ ಶಾಲೆ ಶಿಕ್ಷಕರು, ಪೋಷಕರು ಹಾಜರಿದ್ದು ಮಕ್ಕಳ ಸಂತೆ ವ್ಯವಹಾರ ಪ್ರೋತ್ಸಾಹಿಸಿದರು.

Get real time updates directly on you device, subscribe now.

Comments are closed.

error: Content is protected !!