ಕುಣಿಗಲ್: ಪಟ್ಟಣದ ಇತಿಹಾಸ ಪ್ರಸಿದ್ಧ ತಾಣವಾದ ಕುದುರೆ ಫಾರಂನ್ನು ಹಾಗೆ ಉಳಿಸಿಕೊಂಡು ಹೋಗುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲು ವಿವಿಧ ಪಕ್ಷಗಳ, ಸಂಘಟನೆಗಳ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದರು.
ಪಟ್ಟಣದ ಹೃದಯ ಭಾಗದಲ್ಲಿ 415 ಎಕರೆ ವಿಸ್ತೀರ್ಣ ದಲ್ಲಿರುವ ಪಶು ಸಂಗೋಪನೆ ಇಲಾಖೆ ಒಡೆತನದ ಕುದುರೆ ಫಾರಂ ಖಾಸಗಿಯವರಿಗೆ ಗುತ್ತಿಗೆ ಮೇಲೆ ನೀಡಲಾಗಿದ್ದು, ಗುತ್ತಿಗೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದರಿ ಫಾರಂನ್ನು ವ್ಯವಸ್ಥಿತ ನಗರ ಪ್ರದೇಶವಾಗಿ (ಇಂಟಿಗ್ರೇಟೆಡ್ ಟೌನ್ ಶಿಪ್) ವಿಂಗಡಿಸುವ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುತ್ತಿದ್ದು, ಇದನ್ನು ವಿರೋಧಿಸಿದ ಪಟ್ಟಣದ ವಿವಿಧ ಸಂಘಟನೆಗಳು ಕುದುರೆ ಫಾರಂ ಉಳಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ಬುಧವಾರ ಖಾಸಗಿ ಸಮುದಾಯ ಭವನದಲ್ಲಿ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ಇತಿಹಾಸ ಪ್ರಸಿದ್ಧ ಕುದುರೆ ಫಾರಂ ಉಳಿಸಲು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ, ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ನೂರಾರು ಎಕರೆ ಸರ್ಕಾರಿ ಭೂಮಿ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಧಾನಿಗಳ ಗಮನ ಸೆಳೆಯಲಾಗುವುದು ಎಂದರು.
ಮುಖಂಡ ರಾಜೇಶ್ ಗೌಡ ಮಾತನಾಡಿ, ಆಡಳಿತ ಪಕ್ಷದ ಶಾಸಕರು ಇತಿಹಾಸ ಅರಿಯದೆ ಕುದುರೆ ಫಾರಂ ಜಾಗ ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಲು ಮುಂದಾಗಿರುವುದು ಖಂಡನೀಯ, ಎಲ್ಲಾ ರೀತಿಯ ಹೋರಾಟವನ್ನು ಪಕ್ಷಾತೀತವಾಗಿ ಮಾಡೋಣ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ಶಾಸಕರು ಕುದುರೆ ಫಾರಂ ಜಾಗವನ್ನು ರಿಯಲ್ ಎಸ್ಟೇಟ್ ಮಾಡಲು ಹೊರಟಿರೋದು ಖಂಡನೀಯ, ಇವರು ಬೇಕಾದರೆ ತಾಲ್ಲೂಕಿನ ಬೇರೆಡೆ ಇರುವ ಪ್ರದೇಶದಲ್ಲಿ ಇಂಟಿಗ್ರೇಟೆಡ್ ಸಿಟಿ ಮಾಡಲಿ, ಕುದುರೆ ಫಾರಂ ಹಾಗೆ ಉಳಿಸಲಿ, ಒಂದು ವೇಳೆ ಕುದುರೆ ಫಾರಂ ಬೇರೆ ಉದ್ದೇಶಕ್ಕೆ ಬಳಸಲು ಮುಂದಾದರೆ ಸೂಕ್ತ ವೇದಿಕೆ ಮೂಲಕ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಆಪ್ ಪಕ್ಷದ ಜಯರಾಮಯ್ಯ, ಕೆಆರ್ಎಸ್ ಪಕ್ಷದ ರಘು, ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮಾಜಿ ಸದಸ್ಯ ದೊಡ್ಡಯ್ಯ, ಮಠಾಧೀಶರಾದ ಸಿದ್ದರಾಮ ಚೈತನ್ಯ, ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಹಿರಿಯರಾದ ಹುಚ್ಚೇಗೌಡ, ವೆಂಕಟೇಶ, ನಾಗರಾಜ, ರಮೇಶ್ ,ನಾಗಣ್ಣ ಇತರರು ಇದ್ದರು. ಸಭೆಯಲ್ಲಿ ಹಲವು ರೀತಿಯ ಚರ್ಚೆ ನಡೆದ ಬಳಿಕ ಕುದುರೆ ಫಾರಂ ಉಳಿಸಲು ಸಮಿತಿ ಪಕ್ಷಾತೀತ ರಚಿಸಿ ಸಂಘಟನಾತ್ಮಕವಾಗಿ ಹೋರಾಟ ಮಾಡಲು ತೀರ್ಮಾನಿಸಲಾಯಿತು.
Comments are closed.