ತುಮಕೂರು: ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಿರಿಯ ಚೇತನಗಳಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ಬಿ.ಹೆಚ್ ರಸ್ತೆಯ ಗಾಂಧಿ ಭವನದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹಿರಿಯ ಗಾಂಧಿವಾದಿ ಟಿ.ಆರ್. ರೇವಣ್ಣ ಅವರಿಗೆ ಸನ್ಮಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಭಾರತ ದೇಶವು ಪರಕೀಯರ ಆಳ್ವಿಕೆಯಿಂದ ಮುಕ್ತ ಗೊಂಡು ಆಗಸ್ಟ್-2022ಕ್ಕೆ 75 ವಸಂತಗಳನ್ನು ಪೂರೈಸಲಿದೆ. ಈ ನೆನಪನ್ನು ಅವೀಸ್ಮರಣೀಯವಾಗಿಸಲು ಸರ್ಕಾರದ ನಿರ್ದೇಶನದಂತೆ ತುಮಕೂರು ಜಿಲ್ಲಾಡಳಿತವು ಹಮ್ಮಿಕೊಳ್ಳಲಾಗಿರುವ 75 ಕಾರ್ಯಕ್ರಮಗಳಲ್ಲಿ ಇಂದಿನ ಕಾರ್ಯಕ್ರಮವು 3ನೇಯದಾಗಿದೆ. ಪ್ರಸಕ್ತ ದಿನಗಳಲ್ಲಿ ಕೋವಿಡ್-19ರ ಸಮಸ್ಯೆಗಳ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಜೆ.ಚಿದಾನಂದಮೂರ್ತಿ ಅವರು ಮಾತನಾಡುತ್ತಾ, ಸನ್ಮಾನಿತರಾದ ಟಿ.ಆರ್.ರೇವಣ್ಣ ಅವರು ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಹಿರಿಯ ಗಾಂಧಿವಾದಿಗಳು ಅವರ ನಡೆ ನುಡಿಯೇ ನಮಗೆ ಎಂದಿಗೂ ಆದರ್ಶಪ್ರಾಯವಾದುದು. ಶ್ರೀಯುತರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತನು, ಮನ ಹಾಗೂ ಧನ ಅರ್ಪಿಸಿದವರು, ಜಿಲ್ಲಾಡಳಿತದಿಂದ ಸನ್ಮಾನಿಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಟಿ.ಆರ್.ರೇವಣ್ಣ ಮಾತನಾಡಿ, ತುಮಕೂರು ನಗರದಲ್ಲಿ ಸ್ವಾತಂತ್ರೋತ್ತರದಲ್ಲಿ ನಡೆಸಿದ ವಿವಿಧ ಚಳವಳಿಗಳನ್ನು ನೆನಪಿಸಿಕೊಂಡರು. ಮಹಾತ್ಮ ಗಾಂಧೀಜಿ ಅವರು ತುಮಕೂರು ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರೌಢಶಾಲಾ ಮೈದಾನಕ್ಕೆ ಭೇಟಿ ನೀಡಿದ ನೆನಪುಗಳನ್ನು ಮೆಲುಕು ಹಾಕಿದರು.
ಅಂದಿನ ದಿನಗಳಲ್ಲಿ ದೇಶಕ್ಕಾಗಿ ಜನರು ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಜನರು ತಮ್ಮ ತನು, ಮನ, ಧನವನ್ನು ಅರ್ಪಿಸಿಕೊಳ್ಳುತ್ತಿದ್ದ ರೀತಿ ಅದ್ಭುತವಾದುದು, ಇಂದಿನ ದಿನಗಳಲ್ಲಿ ಆ ರೀತಿಯ ಸಮರ್ಪಣಾ ಮನೋಭಾವ ಜನರಲ್ಲಿ ಕಣ್ಮರೆಯಾಗುತ್ತಿರುವುದು ವಿಷಾದನೀಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಮಲ್ಲಸಂದ್ರ ಗ್ರಾಮದ ಯೋಗ ಗುರು ನರಸಿಂಹಮೂರ್ತಿ, ವಿಶ್ವಭಾರತಿ ಶಾಲೆಯ ದೈಹಿಕ ಶಿಕ್ಷಕ ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಕೆ
Get real time updates directly on you device, subscribe now.
Prev Post
Next Post
Comments are closed.