ತುಮಕೂರು: ನಾಯಿಗಳಿಗೆ ರೇಬೀಸ್ ಲಸಿಕೆ ನೀಡುವಿಕೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಪರಿಣಾಮಕಾರಿಯಾಗಿ ನಿಯಂತ್ರಿಸುವಂತೆ ಜಿಲ್ಲಾ ಪ್ರಾಣಿದಯಾ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿಣಿ ಸಭೆಯ ನಡುವಳಿಯ ರೀತ್ಯ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಮಾಡಿ, ಯಾವುದೇ ಸಭೆಯಲ್ಲಿ ನಿರ್ಣಯಿಸಿದ ನಡಾವಳಿಗಳನ್ನು ಸಮಗ್ರ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘ ಸದಸ್ಯ ಕಾರ್ಯದರ್ಶಿ ಡಾ.ಗೀರಿಶ್ ಬಾಬು ರೆಡ್ಡಿ ಮಾತನಾಡಿ, ತುಮಕೂರು ನಗರದಲ್ಲಿ 2020ರ ಪ್ರಾಣಿ ಗಣತಿ ಅನುಸಾರ ಎರಡು ಸಾವಿರ ನಾಯಿಗಳಿದ್ದು, ಪ್ರಸ್ತುತ ಸುಮಾರು ಹತ್ತು ಸಾವಿರ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ, ಕೋಳಿ ತ್ಯಾಜ್ಯ ಹಾಗೂ ಬೀದಿ ನಾಯಿಗಳಿಗೆ ನಿಗದಿತ ಸ್ಥಳದಲ್ಲಿ ಆಹಾರ ಹಾಕದೆ ಎಲ್ಲೆಂದರಲ್ಲಿ ಆಹಾರ ಎಸೆಯುತ್ತಿರುವ ಬಗ್ಗೆ ಮತ್ತು ಬೀದಿ ನಾಯಿಗಳ ಹಾವಳಿ ಬಗ್ಗೆ ದೂರು ಪ್ರಕರಣ ಜಿಲ್ಲೆಯಲ್ಲಿ ಹೆಚ್ಚು ದಾಖಲಾಗುತ್ತಿವೆ ಎಂದರು.
ಹಿರಿಯ ನಾಗರಿಕರು, ಮಕ್ಕಳು, ಅಶಕ್ತರು ಹಾಗೂ ಸಾರ್ವಜನಿಕರು ಸಂಚಾರ ಮಾಡುವಾಗ ನಾಯಿಗಳಿಂದ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಪ್ರಮುಖ ಅಸ್ತ್ರವಾಗಿದೆ, ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಪ್ರತೀ ಬೀದಿ ನಾಯಿಗಳಿಗೂ ಮಾಡಬೇಕು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು, ನಗರಸಭೆ, ಗ್ರಾಮ ಪಂಚಾಯತ್ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ಗುರಿ ನಿಗದಿಪಡಿಸಿ ಸಾಧನೆ ಮಾಡಬೇಕು, ನಾಯಿಗಳಗೆ ರೇಬೀಸ್ ಚುಚ್ಚು ಮದ್ದುಗಳನ್ನು ತಪ್ಪದೇ ಹಾಕಿಸಬೇಕು, ಯಾರೂ ಪ್ರಾಣಿಗಳಿಗೆ ಹಿಂಸೆ ನೀಡಬಾರದು, ಸಾಕು ಪ್ರಾಣಿ ಪೋಷಣೆಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಬೇಕು, ಸರಕಾರಿ ಗೋಶಾಲೆಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು, ಅನಾಥ ಪ್ರಾಣಿಗಳ ರಕ್ಷಣೆ ಹಾಗೂ ಪೋಷಣೆಗೆ ಪ್ರಾಣಿ ದಯಾ ಸಂಘವು ಕಾರ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಬೀದಿ ನಾಯಿಗಳಿಗೆ ಕಿರುಕುಳ ಬಗ್ಗೆ ರೇಣುಕ ಪ್ರಸಾದ್ ಅವರು ಸಲ್ಲಿಸಿರುವ ದೂರು, ಸರ್ಕಾರಿ ಗೋಶಾಲೆಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವ ಕುರಿತು, ಪ್ರಾಣಿ ಕಲ್ಯಾಣ ಸಮಿತಿ ಸ್ಥಾಪನೆ, 2024ನೇ ಅವಧಿಗೆ ಜಿಲ್ಲಾ ಪ್ರಾಣಿದಯಾ ಸಂಘ ನವೀಕರಿಸುವ ಕುರಿತು, ಸರ್ಕಾರಿ ಗೋಶಾಲೆಗೆ ಮೇವು ಖರೀದಿಸುವ ಬಗ್ಗೆ ಹಾಗೂ ಬೀದಿ ನಾಯಿಗಳಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವು ಅಂಶಗಳ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಹೆಚ್ಚುವರಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯ ವಿ. ಮರಿಯಪ್ಪ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಯ್ಯ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ವಿರೇಶ್ ಕಲ್ಮಠ್, ಸುರಭಿ ಗೋಶಾಲೆಯ ಮಧುಸೂದನ ರಾವ್ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪ್ರಾಣಿ ದಯಾ ಸಂಘದ ಸದಸ್ಯರು ಹಾಜರಿದ್ದರು.
Comments are closed.