ಗುಬ್ಬಿ: ಗ್ರಾಮ ಪಂಚಾಯಿತಿಗಳು ಎಲ್ಲಾ ರೀತಿಯ ಸ್ಥಳೀಯ ಆಡಳಿತ ಮಾಡುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಜಿಲ್ಲಾ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಭು.ಜಿ. ತಿಳಿಸಿದರು.
ತಾಲೂಕಿನ ಚೇಳೂರು ಹೋಬಳಿಯ ಇರಕಸಂದ್ರ ಗ್ರಾಮದ ಪಂಚಾಯಿತಿಗೆ ಭೇಟಿ ನೀಡಿ ನರೇಗ, ಜಲ್ ಜೀವನ್, ಸ್ವಚ್ಛ ತುಮಕೂರು, ನಮ್ಮ ತುಮಕೂರು ಆರೋಗ್ಯ ಅಭಿಯಾನ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಮಾಹಿತಿ ಅಧಿಕಾರಿಗಳಿಂದ ಪಡೆದು ಮಾತನಾಡಿ, ಇಡೀ ರಾಜ್ಯದಲ್ಲಿಯೇ ಬಹಳ ವಿಶೇಷವಾಗಿ ತುಮಕೂರು ಆರೋಗ್ಯ ಅಭಿಯಾನ ಕಾರ್ಯಕ್ರಮ ರೂಪಿಸಿದ್ದು ಇದರ ಮೂಲಕ ಗ್ರಾಮಾಂತರ ಭಾಗದಲ್ಲಿ ಇರುವಂತಹ 10 ಖಾಯಿಲೆ ಗುರುತಿಸಿದ್ದು, ಉಚಿತವಾಗಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿದ್ದು ಈಗಾಗಲೇ ಇಡೀ ಜಿಲ್ಲೆಯಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎಂದ ಅವರು ಈ ವರ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ, ಕೆಲವು ಭಾಗದಲ್ಲಿ ಜಿಪಿಎಸ್ ಸಮಸ್ಯೆ ಆಗಿರುವುದು ಕಂಡು ಬಂದಿದೆ, ಅದನ್ನು ಸರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ಆದರೂ ಸಮಸ್ಯೆ ಏನಾದರೂ ಕಂಡು ಬಂದಲ್ಲಿ ಮನೆ ಕಟ್ಟುವವರಿಗೆ ಅನುದಾನ ಬರದೇ ಇದ್ದಂತಹ ಸಂದರ್ಭದಲ್ಲಿ ನೇರವಾಗಿ ಮೇಲಾಧಿಕಾರಿಗಳಿಗೆ ತಿಳಿಸಬಹುದು ಎಂಬ ಮಾಹಿತಿ ಕೂಡ ತಿಳಿಸಿದ್ದೇವೆ ಎಂದರು.
ಇನ್ನೂ ಇಡೀ ಜಿಲ್ಲೆಯಲ್ಲಿ ಸುಮಾರು 1750 ಎಕರೆಷ್ಟು ಜಮೀನು ನೀಡಿದ್ದು ಅದರ ಮೂಲಕ ನಿವೇಶನ ಇಲ್ಲದವರಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಿವೇಶನ ನೀಡುವ ಗುರಿ ಹೊಂದಿದ್ದು ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ನಿವೇಶನ ಮನೆ ಇಲ್ಲದವರಿಗೆ ಸೂರು ಕಟ್ಟಿಕೊಡಲು ಜಿಲ್ಲಾಧಿಕಾರಿ ಈಗಾಗಲೇ ಗುರುತಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಸೇರಿದಂತೆ ತಾಲೂಕಿನ ಅಧಿಕಾರಿಗಳು ಭಾಗಿಯಾಗಿದ್ದರು.
Comments are closed.