ಕಡಲೆಕಾಯಿ, ಹಣ್ಣು ಮಾರಾಟ ಮಾಡಿ ಪ್ರತಿಭಟನೆ

ಮುಂದುವರೆದ ಅತಿಥಿ ಉಪನ್ಯಾಸಕರ ಹೋರಾಟ- ಸರ್ಕಾರದ ವಿರುದ್ಧ ಆಕ್ರೋಶ

54

Get real time updates directly on you device, subscribe now.


ತುಮಕೂರು: ಅತಿಥಿ ಉಪನ್ಯಾಸಕರ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದ್ದು, ಕಡಲೆಕಾಯಿ ಮತ್ತು ಹಣ್ಣುಗಳ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಪ್ರತಿಭಟನಾ ಸ್ಥಳದಲ್ಲೇ ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮುಖೇನ ಸರ್ಕಾರದ ಧೋರಣೆ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಈ ವೇಳೆ ಅತಿಥಿ ಉಪನ್ಯಾಸಕಿ ಚೈತ್ರ ಮಾತನಾಡಿ, ಸರ್ಕಾರಗಳು, ರಾಜಕೀಯ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಮಾತನಾಡುವುದೇ ಬೇರೆ, ಸರ್ಕಾರ ನಡೆಸುತ್ತಿರುವಾಗ ಮಾತನಾಡುವುದೇ ಬೇರೆ ಆಗಬಾರದು, ಯಾವಾಗಲೂ ಒಂದೇ ರೀತಿಯಾಗಿ ವರ್ತಿಸಬೇಕು, ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗವೆಂದರೆ ಅದು ಅತಿಥಿ ಉಪನ್ಯಾಸಕರಾಗಿದ್ದು, 22 ದಿನ ಕಳೆದರೂ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸದೆ ಇರುವುದು ದುರಂತವಾಗಿದೆ, ನಮ್ಮ ಸೇವೆ ಖಾಯಮಾತಿ ಮಾಡುವ ವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಡಾ. ಧರ್ಮವೀರ.ಕೆ.ಎಚ್. ಮಾತನಾಡಿ, ನಾವು ಪ್ರತಿನಿತ್ಯ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ, 22 ದಿನಗಳಿಂದ ನಮ್ಮ ಪ್ರತಿಭಟನೆಯಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದಂತಾಗಿದೆ, ಸರ್ಕಾರಕ್ಕೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಂತಾಗಿದೆ, ವಿದ್ಯಾರ್ಥಿಗಳಿಗೆ ಒಂದು ಕಡೆ ತರಗತಿಗಳು ಇಲ್ಲದೇ ಅನಾಥ ಪ್ರಜ್ಞೆ ಕಾಡುತ್ತಿದ್ದರೆ, ಅತಿಥಿ ಉಪನ್ಯಾಸಕರಿಗೆ ಜೀವನದ ಭದ್ರತೆ ಇಲ್ಲದಂತಾಗಿದೆ, ಈಗಾಗಲೇ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿ ಪರಿಷತ್ ಮುಂತಾದ ಸಂಘಟನೆಗಳು ಅತಿಥಿ ಉಪನ್ಯಾಸಕರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರದ ಇನ್ನಾದರೂ ಎಚ್ಚೆತ್ತು ನಮ್ಮ ನ್ಯಾಯಯುತ ಬೇಡಿಕೆಯಾದ ಸೇವೆ ಖಾಯಮಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣತಿಮ್ಲಾಪುರ್, ಡಾ.ಮಲ್ಲಿಕಾರ್ಜುನ್.ಎಂ.ಟಿ, ಕಾಂತರಾಜು, ಶಂಕರಪ್ಪ ಹಾರೋಗೆರೆ, ಗಿರಿಜಮ್ಮ.ಟಿ.ಆರ್, ಅನಿತಾ, ವಿನುತಾ, ಯಶಸ್ವಿನಿ, ಸುರೇಶ, ಟಿ.ತೊಂಟಾರಾಧ್ಯ, ದೀಪಕ್, ಗಿರೀಶ್, ಮಹೇಶ್, ಶಶಿಕುಮಾರ್, ಸೌಮ್ಯ, ಡಾ.ಸವಿತ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.
ಅತಿಥಿ ಉಪನ್ಯಾಸಕರ ಪಂಜಿನ ಮೆರವಣಿಗೆ

ತುಮಕೂರು- ಸೇವೆ ಖಾಯಮಾತಿ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು.
ನಗರದ ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!