ತುಮಕೂರು: ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಂದ ಅನುಮತಿ ಪಡೆಯದೆ ಸ್ಕ್ಯಾನಿಂಗ್ ಸೆಂಟರ್ ಗಳನ್ನು ಪ್ರಾರಂಭಿಸಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವ ರೇಡಿಯೋಲಜಿಸ್ಟ್ಗಳ ವಿರುದ್ಧ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆಯಡಿಯಲ್ಲಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿಯಲ್ಲಿ ಮಾತನಾಡಿ, ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಅನಧಿಕೃತವಾಗಿ ಹೆಚ್ಚು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಚಿವರು ಮತ್ತು ಆಯುಕ್ತರು ಮುಂದೆ ಇಂತಹ ಪ್ರಕರಣ ನಡೆಯದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ರೇಡಿಯೋಲಜಿಸ್ಟ್ಗಳು ಯಾವುದಾದರೂ ಎರಡು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಬೇಕು, ಎರಡಕ್ಕಿಂತ ಹೆಚ್ಚು ಕಡೆ ಕೆಲಸ ಮಾಡುತ್ತಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಹಾಗೂ ಆ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ತುರುವೇಕೆರೆ ತಾಲ್ಲೂಕಿನ ಎರಡು ಸ್ಕ್ಯಾನಿಂಗ್ ಕೇಂದ್ರಗಳನ್ನು ಸೀಲ್ ಡೌನ್ ಮಾಡಿ ನ್ಯಾಯಾಲಯಕ್ಕೆ ಪ್ರಕರಣ ಒಪ್ಪಿಸಲಾಗಿದೆ ಎಂದರು.
ಸಾರ್ವಜನಿಕರು ಭ್ರೂಣ ಪತ್ತೆ ಮಾಡುವುಂತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವಂತೆ ವೈದ್ಯರ ಮೇಲೆ ಒತ್ತಡ ಹಾಕಬಾರದು ಎಂದು ತಿಳಿಸಿದರಲ್ಲದೇ ಈಗಾಗಲೇ ಗಂಡು ಮತ್ತು ಹೆಣ್ಣು ಲಿಂಗಾನುಪಾತ ವ್ಯತ್ಯಾಸವಾಗಿದೆ, ಲಿಂಗಾನುಪಾತ ಸಮತೋಲನದಲ್ಲಿ ಇಡುವುದಕ್ಕೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಂತ್ರ ವಿಧಾನಗಳ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ 18 ವರ್ಷದೊಳಗಿನ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ, ಆದ್ದರಿಂದ ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಮದುವೆ ಮಾಡುತ್ತಿರುವ ಮಾಹಿತಿ ಕಂಡುಬಂದರೆ ಕೂಡಲೇ ಅಧಿಕಾರಿಗಳಿಗೆ ತಿಳಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯೋಜನಾ ನಿರ್ದೇಶಕರು ಹಾಗೂ ರಾಜ್ಯ ಸಕ್ಷಮ ಪ್ರಾಧಿಕಾರ ಆದೇಶದಂತೆ ಪಿಸಿ ಮತ್ತು ಪಿ ಎನ್ ಡಿ ಟಿ ಕಾಯ್ದೆಯಡಿಯಲ್ಲಿ ಜಿಲ್ಲಾ ಸಲಹಾ ಸಮಿತಿ ಪುನರ್ ರಚಿಸುವುದಕ್ಕೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ ಕೆ.ಬಿ, ಡಾ.ಲೋಕೇಶ್ ರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲರಾದ ಡಾ.ಮುಕ್ತಾಂಭ, ವಕೀಲ ಕುಮಾರ ಸ್ವಾಮಿ.ಎಂ.ಎನ್, ಸಮಾಜ ಸೇವಕಿ ಮಲ್ಲಿಕಾ.ಜಿ, ಎನ್ ಜಿ ಓ ರಾಣಿ ಚಂದ್ರಶೇಖರ್ ಇದ್ದರು.
Comments are closed.