ಡಿ.29, 30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

84

Get real time updates directly on you device, subscribe now.


ತುಮಕೂರು: ಡಿಸೆಂಬರ್ 29ರ ಶುಕ್ರವಾರ ಮತ್ತು 30 ರ ಶನಿವಾರ ನಡೆಯುವ 15ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ ವಿವಿಧ ವೃತ್ತಗಳನ್ನು ಕನ್ನಡ ಬಾವುಟ, ವಿದ್ಯುತ್ ದೀಪಗಳಿಂದ ಅಲಂಕರಿಸುವ ನಿಟ್ಟಿನಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಧ್ಯಕ್ಷತೆಯಲ್ಲಿ ಕನ್ನಡಪರ ಸಂಘಟನೆಗಳ ಜೊತೆಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.
ಕನ್ನಡ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್, ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ನೇತಾಜಿ ಶ್ರೀಧರ್, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಉಮೇಶ್, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಂಕರ್, ಕರುನಾಡ ವಿಜಯ ಸೇನೆಯ ಅಧ್ಯಕ್ಷ ಅರುಣ್ ಕೃಷ್ಣಯ್ಯ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರಾದ ಆದೇಶ್, ಸತೀಶ್, ಶಿವಕುಮಾರ್, ಗುರು, ಕಸಾಪ ಗೌರವ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಸಾಹಿತ್ಯಪರಿಷತ್ತಿನ ಸಂಘ ಸಂಸ್ಥೆಯ ಪ್ರತಿನಿಧಿಯಾಗಿರುವ ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಅವರನ್ನು ನಗರ ಅಲಂಕಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವ ಡಿಸೆಂಬರ್ 29 ಮತ್ತು 30 ರಂದು ಎರಡು ದಿನಗಳ ಕಾಲ ಇಡೀ ನಗರದ ಪ್ರಮುಖ ವೃತ್ತಗಳಲ್ಲಿ ಕನ್ನಡ ಬಾವುಟ, ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಿ, ಕನ್ನಡದ ವಾತಾರವಣ ನಿರ್ಮಿಸುವ ಜವಾಬ್ದಾರಿ ನೀಡಲಾಯಿತು.

ಈ ವೇಳೆ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಿಸೆಂಬರ್ 29, 30 ರಂದು ಎರಡು ದಿನಗಳ ಕಾಲ ನಗರದ ಗಾಜಿನಮನೆಯಲ್ಲಿ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದೆ, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಬಹುಭಾಷಾ ಸಾಹಿತಿಗಳು, ಲೇಖಕರು ಹಾಗೂ ನಾಟಕಕಾರ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ, ತುಮಕೂರು ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶಿವಮೂರ್ತಿ ಶಾಸ್ತ್ರಿಗಳು ವಹಿಸಿದ್ದರು, 15 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರ ಮೊಮ್ಮಗ ಡಾ.ಹೆಚ್.ಎಸ್.ಶಿವಪ್ರಕಾಶ್ ವಹಿಸುತ್ತಿರುವುದು ಬಹಳ ಸಂತೋಷದ ವಿಚಾರ, ಡಿಸೆಂಬರ್ 29ರ ಬೆಳಗ್ಗೆ 8 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಟೌನ್ ಹಾಲ್ ವೃತ್ತದಿಂದ ಆರಂಭಿಸಿ, ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ, ರಾಮಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಗಾಜಿನಮನೆ ತಲುಪಲಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಮ್ಮೇಳನಾಧ್ಯಕ್ಷರ ಕೋರಿಕೆಯಂತೆ ಬೆಳ್ಳಿ ಲೇಪಿತ ರಥದಲ್ಲಿ ಸಮ್ಮೇಳನಾಧ್ಯಕ್ಷರ ಬದಲಾಗಿ ತಾಯಿ ಭುವನೇಶ್ವರಿಯ ಭಾವಚಿತ್ರವಿಟ್ಟು, ವೀರಗಾಸೆ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಸಾವಿರಾರು ಶಾಲಾ ಮಕ್ಕಳ ಜಯಘೋಷ, ಕನ್ನಡದ ಹಾಡು, ನೃತ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುವುದು ಎಂದರು.
ಕನ್ನಡಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಘಟನೆಗಳು ತಾಯಿ ಭುವನೇಶ್ವರಿಯ ಎರಡು ಕಣ್ಣುಗಳಿದ್ದಂತೆ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ನಾವು ಸದಾ ಸಾಹಿತ್ಯ ಪರಿಷತ್ತಿನೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದರು.

Get real time updates directly on you device, subscribe now.

Comments are closed.

error: Content is protected !!