ತುಮಕೂರು: ವಿದ್ಯುತ್ ಅಪಘಾತ ತಡೆಯುವ ಸಪ್ತಾಹದ ಅಂಗವಾಗಿ ಬೆಸ್ಕಾಂ ತುಮಕೂರು ವಿಭಾಗದ ವತಿಯಿಂದ ವಿದ್ಯುತ್ ಸುರಕ್ಷತಾ ಜಾಥಾ ನಗರದಲ್ಲಿ ನಡೆಸಲಾಯಿತು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಆರಂಭವಾದ ವಿದ್ಯುತ್ ಸುರಕ್ಷತಾ ಜನ ಜಾಗೃತಿ ಜಾಥಾಕ್ಕೆ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಹೆಚ್.ವಿ.ಕೃಷ್ಣ ಪ್ರಸಾದ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರು, ರೈತರು, ಶಾಲಾ ಮಕ್ಕಳು ಹಾಗೂ ಬೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಅಪಘಾತ ತಡೆಯುವ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾಥಾ ನಡೆಸಲಾಗುತ್ತಿದೆ ಎಂದರು.
ವಿದ್ಯುತ್ ಅಪಘಾತ ಉಂಟಾಗದಂತೆ ಹೇಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಸ್ಕಾಂ ಮುಂದಾಗಿದೆ, ಅಪಘಾತ ತಡೆಗಟ್ಟುವ ಸಲುವಾಗಿ ಸುರಕ್ಷತಾ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು, ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬಾರದು, ತಕ್ಷಣ ಬೆವಿಕಂ ಸಹಾಯವಾಣಿ 1912ಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು ಎಂದರು.
ವಿದ್ಯುತ್ ಸ್ವಿಚ್ ಗಳು ಹಾಗೂ ವಿದ್ಯುತ್ ಉಪ ಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬಾರದು, ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬೇಡಿ ಎಂದು ಸಲಹೆ ನೀಡಿದರು.
ತುಮಕೂರು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಸಾರ್ವಜನಿಕರು ವಿದ್ಯುತ್ ಅಪಘಾತಕ್ಕೆ ಒಳಗಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತಿದೆ, ಮಳೆಗಾಲದಲ್ಲಿ ವಿದ್ಯುತ್ ಕಂಬಗಳಿಗೆ ತಂತಿ ಕಟ್ಟಿ ಬಟ್ಟೆಗಳನ್ನು ಒಣಗಿಸುತ್ತಾರೆ, ಇದರಿಂದ ವಿದ್ಯುತ್ ಅಪಘಾತ ಸಂಭವಿಸುತ್ತಿವೆ, ಹಾಗಾಗಿ ಯಾರೂ ಸಹ ವಿದ್ಯುತ್ ಕಂಬಗಳಿಗೆ ತಂತಿ ಕಟ್ಟಬಾರದು, ಹಾಗೆಯೇ ಜಾನುವಾರುಗಳನ್ನು ಸಹ ಕಟ್ಟಬಾರದು ಎಂದು ಮನವಿ ಮಾಡಿದರು.
ತುಮಕೂರು ತಾಲ್ಲೂಕಿನ 220 ಹಾಗೂ ಗುಬ್ಬಿ ತಾಲ್ಲೂಕಿನ 180 ಶಾಲೆಗಳಲ್ಲಿ ಚಿತ್ರಕಲೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಏರ್ಪಡಿಸಿ ವಿದ್ಯುತ್ ಅಪಘಾತಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ, ವಿದ್ಯುತ್ ಅಪಘಾತ ತಡೆಗಟ್ಟಲು ಸಾರ್ವಜನಿಕರು ಬೆಸ್ಕಾಂನೊಂದಿಗೆ ಸಹಕರಿಸಬೇಕು ಎಂದು ಕೋರಿದರು.
ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು ಹಾಗೂ ಮರದ ಕೊಂಬೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ, ತಂತಿ ಬೇಲಿಗಳಿಗೆ ವಿದ್ಯುತ್ ಹಾಯಿಸಬಾರದು, ಬೆವಿಕಂ ಲೈನ್ ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಅಪರಾಧ ಎಂದರು.
ಇದೇ ಸಂದರ್ಭದಲ್ಲಿ ಅಧೀಕ್ಷಕ ಇಂಜಿನಿಯರ್ ಕೃಷ್ಣಪ್ಪ ಅವರು ಬೆಸ್ಕಾಂ ಪವರ್ ಮೆನ್ ಗಳಿಗೆ ಸುರಕ್ಷತಾ ಕ್ರಮ ಕೈಗೊಳ್ಳುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಹೊರಟ ಜಾಥಾವು ಅಶೋಕ ರಸ್ತೆ, ಟೌನ್ ಹಾಲ್ ವೃತ್ತ, ಬಿ.ಹೆಚ್. ರಸ್ತೆ ಮುಖೇನ, ಸ್ವಾಮೀಜಿ ಸರ್ಕಲ್ ಮೂಲಕ ಹಾದು ಬೆಸ್ಕಾಂ ಕಚೇರಿ ತಲುಪಿತು.
ಜಾಥಾದಲ್ಲಿ ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಗಳಾದ ಮೇಘರಾಜ್, ಅನಂತರಾಮಯ್ಯ, ಎಇಇಗಳಾದ ಮಲ್ಲಣ್ಣ, ನಾಗರಾಜು, ಹರೀಶ್, ಪುರುಷೋತ್ತಮ್, ಅಮ್ಜದ್, ಶೈಲೇಂದ್ರ, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಹೆಚ್.ವೆಂಕಟರಮಣಯ್ಯ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು, ಪವರ್ ಮೆನ್ ಗಳು ಭಾಗವಹಿಸಿದ್ದರು.
Comments are closed.