ತುಮಕೂರು: ಭಾರತವುಒಟ್ಟು 57,000ಕ್ಕೂ ಹೆಚ್ಚು ಮಹಿಳಾ ಸಂಶೋಧಕರನ್ನು ಹೊಂದಿದೆ, ಇದು ದೇಶದ ಒಟ್ಟು ಸಂಶೋಧಕರ ಶೇ.16.6 ರಷ್ಟಿದೆ, ಸಂಶೋಧನೆ, ವಿಜ್ಞಾನ- ತಂತ್ರಜ್ಞಾನದ ಮೇಲಿರುವ ಆಸಕ್ತಿ, ದೂರದೃಷ್ಟಿಯನ್ನು ಮಹಿಳೆಯರು ಸ್ವೀಕರಿಸಿರುವ ಮಹತ್ವ ಸಾರುತ್ತದೆ ಎಂದು ನವದೆಹಲಿಯ ಏಮ್ಸ್ನ ಡಾ.ಉಮಾಕುಮಾರ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಹಾಗೂ ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕ ಇದರ ಮಾತೃ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 14ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರೋಗ್ಯ, ವಿಜ್ಞಾನ, ಸಂಶೋಧನ ಕ್ಷೇತ್ರಗಳಲ್ಲಿ ಮುಂದಿದ್ದೇವೆ, ಮನೆಯಿಂದ ಹೊರಗೆ, ನಾಲ್ಕು ಗೋಡೆಗಳಾಚೆಗೆ ಸಾಧನೆಯ ಮೆಟ್ಟಿಲೇರಲು ಹೊರಟಿದ್ದೇವೆ, ಹೋರಾಡುತ್ತಿದ್ದೇವೆ, ಸಮಾಜದಲ್ಲಿ ಹೆಣ್ಣಿನ ಪಾತ್ರ ದೊಡ್ಡದು, ಆಧ್ಯಾತ್ಮಿಕ ಆರೋಗ್ಯದ ಅಗತ್ಯವಿದೆ, ಸಮಾಜದ ಮೂಲ ತತ್ವದ ಮೌಲ್ಯವು ಆರೋಗ್ಯದ ಮೇಲೆ ಯೋಗ ಕ್ಷೇಮವನ್ನು ಕೇಂದ್ರೀಕರಿಸುವುದಾಗಿದೆ, ವಿದ್ವತ್ಪೂರ್ಣ ಮಹಿಳೆಯರು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದರು.
ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ತನ್ನ ಸುತ್ತಲಿರುವ ಸಮಾಜವನ್ನು ಪ್ರೇರೇಪಿಸುತ್ತಾರೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು ಉತ್ಕೃಷ್ಟವಾಗಿ ರೂಪಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ, ಇದಕ್ಕೆ ಉದಾಹರಣೆ ಎಂಬಂತೆ ವಿಜ್ಞಾನ ಜ್ಯೋತಿ ಅವರ ಕಿರಣ್ ಯೋಜನೆ, 2003ರಲ್ಲಿ ಆರಂಭವಾದ ವಿಜ್ಞಾನ ಭಾರತಿಅವರ ಶಕ್ತಿ ಯೋಜನೆಸಮಾಜಕ್ಕಾಗಿ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ, ಯೋಗ ಮತ್ತು ಆಯುರ್ವೇದವು ಮಹಿಳೆಯರ ಯೋಗ ಕ್ಷೇಮಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಎಡಿಇ- ಡಿ ಆರ್ ಡಿ ಓ ನ ಸಹ ನಿರ್ದೇಶಕಿ, ವಿಜ್ಞಾನಿ ಡಾ.ಆಶಾ ಗರ್ಗ್ ಮಾತನಾಡಿ, ಮಹಿಳಾ ವಿಜ್ಞಾನ ಸಮ್ಮೇಳನಗಳು ಮಹಿಳೆಯರ ಸಾಮಾರ್ಥ್ಯ ಅನ್ವೇಷಿಸಲು ಸಾಧ್ಯವಾಗುತ್ತದೆ, ಶಾಲಾ-ಕಾಲೇಜು, ಪದವಿ ಶಿಕ್ಷಣ ಮುಗಿಸಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯು ತನ್ನ ವಿಭಿನ್ನ ಕೌಶಲ ನಿರೂಪಿಸಲು, ತೊಡಗಲು ಮಹಿಳಾ ಸಂಘಟನೆಯ, ಸಮ್ಮೇಳನಗಳ ಅವಶ್ಯಕತೆಯಿದೆ ಎಂದರು.
ಬೆಂಗಳೂರಿನ ಇಸ್ರೋ ಡಿ ಆರ್ ಡಿ ಓ ನ ಮುಖ್ಯ ಸಂಯೋಜಕಿ, ವಿಜ್ಞಾನಿ ಡಾ.ಮಣಿಮೋಳಿ ಥಿಯೋಡರ್ ಮಾತನಾಡಿ, ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿಯಲ್ಲಿ ಸಂವಹನಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ಪಡೆದ ಮೊದಲ ಮಹಿಳೆ ನಾನೆಂಬ ಹೆಮ್ಮೆ ಇದೆ ಎಂದು ತಿಳಿಸಿದರು.
ಬೆಂಗಳೂರಿನ ಇಸ್ರೋ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ.ಎನ್.ವಲರ್ಮತಿ ಮಾತನಾಡಿ, ಸಂಶೋಧನೆ, ಆವಿಷ್ಕಾರಗಳ ಹಿಂದಿನ ಶ್ರಮವನ್ನು ಸಮಾಜ ಅರಿಯಬೇಕು, ವಿಜ್ಞಾನಿಗಳ ಸಾಧನೆಯ ವೈಭವ ಆಚರಿಸಬೇಕು ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರು ಮುಂದಾಗಬೇಕು, ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು, ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯದೆಡೆಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬರಬೇಕು ಎಂದರು.
2023ನೇ ಸಾಲಿನ ನೋಬಲ್ ಪುರಸ್ಕೃತ ಸರ್ ಸಿ.ವಿ.ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಎಡಿಇ- ಡಿ ಆರ್ ಡಿ ಓ ನ ಸಹ ನಿರ್ದೇಶಕಿ, ವಿಜ್ಞಾನಿ ಡಾ.ಆಶಾ ಗರ್ಗ್ಅವರಿಗೆ, ನೋಬಲ್ ಪುರಸ್ಕೃತೆ ಮೇಡಂ ಮೇರಿಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಇಸ್ರೋ ಡಿಆರ್ಡಿಓನ ಮುಖ್ಯ ಸಂಯೋಜಕಿ, ವಿಜ್ಞಾನಿ ಡಾ.ಮಣಿಮೋಳಿ ಥಿಯೋಡರ್ ಅವರಿಗೆ ನೀಡಿ ಗೌರವಿಸಲಾಯಿತು.
ತುಮಕೂರಿನ ಶ್ರೀದೇವಿ ಚಾರಿಟೆಬಲ್ ಟ್ರಸ್ಟ್ನ ಅಂಬಿಕಾ ಹುಲಿನಾಯ್ಕರ್, ಸ್ವದೇಶಿ ವಿಜ್ಞಾನ ಆಂದೋಳನದ ಅಧ್ಯಕ್ಷ ಗಣೇಶ್ ಕಾರ್ಣಿಕ್, ಪ್ರಧಾನ ಕಾರ್ಯದರ್ಶಿ ಡಾ.ರಮೇಶ್ ಎಚ್, ಸ್ವದೇಶಿ ವಿಜ್ಞಾನ ಆಂದೋಲನ ಮಾತೃ ವೇದಿಕೆಯ ಕೋಶಾಧಿಕಾರಿ ಹಾಗೂ ಅಧ್ಯಕ್ಷೆ ಡಾ.ವೈ.ಎಸ್.ಗಾಯತ್ರಿ, ವಿಜ್ಞಾನಿಗಳಾದ ಡಾ.ವಿ.ಶುಭ, ಡಾ.ಟಿ.ಕೆ.ಅನುರಾಧ, ವಿವಿ ಉಪ ಕುಲಸಚಿವೆ ಡಾ.ಮಂಗಳಾಗೌರಿ.ಎಂ, ಸಹಾಯಕ ಪ್ರಾಧ್ಯಾಪಕರಾದ,ಡಾ.ಜ್ಯೋತಿ, ಡಾ.ಗೀತಾ ವಸಂತ ಇದ್ದರು.
Comments are closed.