ಯುವ ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡಲಿ

58

Get real time updates directly on you device, subscribe now.


ತುಮಕೂರು: ವೃದ್ಧಾಶ್ರಮಗಳಾಗುತ್ತಿರುವ ಗ್ರಾಮಗಳಲ್ಲಿ ಯುವ ವೈದ್ಯರು ಗ್ರಾಮದ ಮಕ್ಕಳಂತೆ ಕರ್ತವ್ಯ ನಿರ್ವಹಿಸಿ ವಯೋವೃದ್ಧರ, ಅಬಲರ ಆರೋಗ್ಯ ಸೇವೆ ಮಾಡಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾ ಸ್ವಾಮೀಜಿ ತಿಳಿಸಿದರು.
ತುಮಕೂರು ತಾಲೂಕಿನ ಅರಳೂರು ಗ್ರಾಮದಲ್ಲಿ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಕುಟುಂಬ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರದ ಮೇಲೆ ಮಕ್ಕಳ ಪ್ರೇಮ ಬೆಳೆದಂತೆಲ್ಲಾ ಪೋಷಕರನ್ನು ತಬ್ಬಲಿ ಮಾಡಿ ಹೋಗುವ ಬೆಳವಣಿಗೆಗಳು ಆತಂಕಕಾರಿಯಾಗಿದೆ, ನಮ್ಮ ಆಸ್ಪತ್ರೆಯ ವೈದ್ಯರು ಇಲ್ಲಿನ ಜನರಿಗೆ ಗುಣಾತ್ಮಕ ಚಿಕಿತ್ಸೆ ನೀಡುವ ಮೂಲಕ ಜನರು ಆನಾರೋಗ್ಯದಲ್ಲಿ ಬೇರೆಯವರನ್ನು ಆಶ್ರಯಿಸದಂತೆ ವಾತ್ಸಲ್ಯ ಹಾಗೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ತನ್ನ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೂ 7 ಗ್ರಾಮಗಳನ್ನು ಆರೋಗ್ಯ ದತ್ತು ಪಡೆದುಕೊಂಡಿದ್ದು, ನಮ್ಮ ವೈದ್ಯರು ನಿರಂತರ ಗ್ರಾಮಕ್ಕೆ ಎಡತಾಕಿ ಆರೋಗ್ಯ ತಪಾಸಣೆ ಜಾಗೃತಿ ಮೂಡಿಸುತ್ತಿದ್ದಾರೆ, ಬಡ ಜನರ ಆರೋಗ್ಯ ಸೇವೆ ಸಲ್ಲಿಸಬೇಕು ಎನ್ನುವ ಲಿಂಗೈಕ್ಯ ಶಿವಕುಮಾರ ಮಹಾ ಸ್ವಾಮೀಜಿಯವರ ಕನಸು ನನಸು ಮಾಡುವಲ್ಲಿ ನಾವು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.

ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ.ಎಂ. ಮಾತನಾಡಿ ಕುಟುಂಬ ಆರೋಗ್ಯ ದತ್ತು ಕಾರ್ಯಕ್ರಮದ ಅಡಿಯಲ್ಲಿ ನಮ್ಮ ವೈದ್ಯರು ಗ್ರಾಮದ ಮನೆ ಮನೆಯ ಆರೋಗ್ಯ ಸರ್ವೇ ಕಾರ್ಯ ನಡೆಸಲಿದ್ದು, ಅವಶ್ಯಕವೆನಿಸಿದರೆ ರೋಗಿಗಳನ್ನು ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ದಾಖಲು ಮಾಡಿಕೊಂಡು ಹೆಚ್ಚಿನ ಚಿಕಿತ್ಸೆ ನೀಡಲಿದ್ದೇವೆ, ಇದು ನಿರಂತರವಾಗಿ ನಡೆಯಲಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಸ್ಪೆಷಾಲಿಟಿ, ಸೂರ್ಪ ಸ್ಪೆಷಾಲಿಟಿ ವಿಭಾಗದ ಸುಮಾರು 50 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಗ್ರಾಮದ ಸುಮಾರು 300 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧಿಗಳನ್ನು ಕೂಡ ವಿತರಿಸಿದರು.

ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಅರಳೂರು ಗ್ರಾಪಂ ಅಧ್ಯಕ್ಷೆ ಮೇಘ ಲೋಕೇಶ್, ಉಪಾಧ್ಯಕ್ಷೆ ಕೃಷ್ಣಯ್ಯ, ಪಿಡಿಓ ಶಂಕರ್, ಅರಳೂರು ಗ್ರಾಮದ ಮುಖಂಡರಾದ ಶಂಕರಯ್ಯ, ಕುಮಾರಯ್ಯ, ರುದ್ರೇಶ್, ಹೊನ್ನೇಶ್ ಕುಮಾರ್, ಉಮಾಶಂಕರ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!