ಬಿಸಿಯೂಟದ ಬೇಳೆ ಕೆರೆಯಂಗಳಕ್ಕೆ ಸುರಿದ ಶಿಕ್ಷಕರು

84

Get real time updates directly on you device, subscribe now.


ಶಿರಾ: ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಬಳಕೆಯಾಗಬೇಕಿದ್ದ ಮೂಟೆಗಟ್ಟಲೆ ತೊಗರಿ ಬೇಳೆ ಕೆರೆಯೊಂದರ ಗುಂಡಿಗೆ ಸುರಿದಿರುವ ಘಟನೆ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಕಳಪೆ ಬೇಳೆ: ಸರ್ಕಾರವೇನೋ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಹಮ್ಮಿಕೊಂಡಿದೆ, ಆದರೆ ಅದಕ್ಕೆ ನೀಡಬೇಕಾದ ಆದ್ಯತೆ ನೀಡುತ್ತಿದೆಯೇ ಎಂದು ಪ್ರಶ್ನಿಸಬೇಕಿದೆ, ಪ್ರಸ್ತುತ ವರ್ಷದಲ್ಲಿ ಮಕ್ಕಳ ಬಿಸಿಯೂಟಕ್ಕೆ ನೀಡಲಾಗಿರುವ ತೊಗರಿ ಬೇಳೆ ಕಳಪೆ ಗುಣಮಟ್ಟದ್ದಾಗಿದ್ದು, ಹುಳುಗಳು ತುಂಬಿ ಬೇಳೆಯನ್ನು ನಿಸ್ಸಾರಗೊಳಿಸಿವೆ, ಹುಳುಗಳಿರುವ ಬೇಳೆ ಬೇಯಿಸಲಾಗದೆ ಅದನ್ನು ಇಲಾಖೆಗೆ ಹಿಂದಿರುಗಿಸಲೂ ಆಗದೆ ಶಾಲೆಯವರು ಕೆರೆಗೆ ಸುರಿದಿದ್ದಾರೆ ಎಂದು ರೈತ ಸಂಘದ ಬುಕ್ಕಾಪಟ್ಟಣ ಹೋಬಳಿ ಅಧ್ಯಕ್ಷ ಕುರುಬರಹಳ್ಳಿ ಪರಮೇಶ್ ಪತ್ರಿಕೆಗೆ ವಿವರಿಸಿದ್ದಾರೆ.

ಗ್ರಾಮಸ್ಥರ ಮಾಹಿತಿಯಂತೆ ಕೆರೆ ನೀರಿನಲ್ಲಿ ಸುರಿದಿದ್ದ ಬೇಳೆ ಕಾಳನ್ನು ಪರಿಶೀಲಿಸಿದ ನಂತರ ಶಾಲೆಗೆ ತೆರಳಿ ವಿಚಾರಿಸಲಾಗಿ, ತಾಲ್ಲೂಕು ಪಂಚಾಯಿತಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅವರ ಅನುಮತಿಯಂತೆ ಬೇಳೆಯನ್ನು ಕೆರೆಗೆ ಸುರಿಯಲಾಗಿದೆ ಎನ್ನುವ ಉತ್ತರ ದೊರೆತಿದೆಯಂತೆ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಸರಿಯಾಗಿ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಕಾಲ ಕಾಲಕ್ಕೆ ಬೇಕಾಗುವ ಆಹಾರ ಪದಾರ್ಥವನ್ನು ಸರಬರಾಜು ಮಾಡಲಾಗದೆ ಒಮ್ಮೆಗೆ ಎಲ್ಲಾ ಪಡಿತರವನ್ನೂ ಕಳುಹಿಸಿ ಕೊಡುವುದರಿಂದ ಬೇಳೆ ಹುಳಹತ್ತಿ ತಿನ್ನಲು ಆಗದಂತಾಗುತ್ತದೆ, ಕನಿಷ್ಟ ಬೇಳೆ ಕಾಳನ್ನಾದರೂ ಕಾಲಕಾಲಕ್ಕೆ ಕಳುಹಿಸಿಕೊಡುವಂತೆ ಮತ್ತು ಶಾಲೆಯಲ್ಲಿನ ಪಡಿತರದ ಗುಣಮಟ್ಟವನ್ನು ಆಗಾಗ್ಗೆ ಪರಿಶೀಲಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ, ರೈತ ಮುಖಂಡ ಈರಾನಾಯ್ಕ, ದೊಡ್ಡಯ್ಯ ಜೊತೆಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!