ರೈತರ ಅರ್ಜಿ ಶೀಘ್ರ ವಿಲೇವಾರಿ ಮಾಡಿ

ಆಡಳಿತ ಯಂತ್ರ ಚುರುಕುಗೊಳಿಸಿ- ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಸೂಚನೆ

61

Get real time updates directly on you device, subscribe now.


ತುಮಕೂರು: ಶಿರಾ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಅವುಗಳನ್ನು ಈ ಕೂಡಲೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರ ಚುರುಕುಗೊಳಿಸಲಾಗುವುದು ಎಂದು ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶಿರಾ ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ರೈತರಿಗೆ ಸ್ಪಂದಿಸಬೇಕೆಂದು ತಾಕೀತು ಮಾಡಿದರು.

ತಾಲ್ಲೂಕಿನಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣ ನಿವೇಶನಗಳ ಸಮಸ್ಯೆ ಜಾಸ್ತಿ ಇದೆ, ನಿವೇಶನ ರಹಿತರಿಗೆ ನಿವೇಶನ ನೀಡಲು ಹಿಂದಿನ ಅವಧಿಯಲ್ಲಿ ಸುಮಾರು 600 ಎಕರೆ ಜಾಗ ಗುರುತಿಸಿ ಮಂಜೂರು ಮಾಡಿಕೊಡಲಾಗಿತ್ತು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗುರುತಿಸಿ ಕೂಡಲೇ ನಿವೇಶನ ನೀಡುವಲ್ಲಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ರೈತರು ಸಾಗುವಳಿ ಚೀಟಿ ಪಡೆಯುವುದಕ್ಕಾಗಿ ತಾಲ್ಲೂಕು ಆಡಳಿತ ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದಾರೆ, ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ರೈತರನ್ನು ಸುಮ್ಮನೆ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೇ ಆಸೆ- ಆಮಿಷಗಳಿಗೆ ಒಳಗಾಗದೆ ಜನಪರ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ಸರ್ಕಾರ ಮತ್ತು ಅಧಿಕಾರಿಗಳು ಮನೆ ಮನೆಗೆ ತೆರಳಿ ಅವರ ಅಹವಾಲು ಆಲಿಸಿ ಸ್ಥಳದಲ್ಲಿಯೇ ಆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅವರ ಕರ್ತವ್ಯ ಸರಿಯಾಗಿ ನಿರ್ವಹಿಸಿದರೆ ಸಾರ್ವಜನಿಕರ ಶೇಕಡಾ 75 ರಷ್ಟು ಸಮಸ್ಯೆ ಪರಿಹಾರವಾಗುತ್ತವೆ, ಕೆಲವು ಅಧಿಕಾರಿಗಳು ನಾಗರಿಕರಿಗೆ ಸಕಾಲದಲ್ಲಿ ಕಚೇರಿಗಳಲ್ಲಿ ಸಿಗದೆ, ಅವರನ್ನು ಅಲೆದಾಡಿಸುತ್ತಿದ್ದಾರೆ ಮತ್ತು ಬೇಜವಾಬ್ದಾರಿತನದಿಂದ ವರ್ತನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿರುವ ನ್ಯಾಯಾಲಯ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳು ಸರ್ಕಾರದ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು, ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಮೇಲೆ ಸಾರ್ವಜನಿಕರಲ್ಲಿ ನಂಬಿಕೆ ಬರುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೆಲಸ ಮಾಡುವ ಮೂಲಕ ತುಮಕೂರು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು, ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸುವ ಮೂಲಕ ಆಯಾ ತಾಲ್ಲೂಕಿನ ಜನರ ಸಮಸ್ಯೆ ನೋಂದಾಯಿಸಿ ಸ್ವೀಕೃತಿ ಪಡೆಯಬಹುದಾಗಿದೆ, ಸದರಿ ಸಮಸ್ಯೆಗಳಿಗೆ ನಿಗದಿತ ಅವಧಿಯೊಳಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಆಯಾ ಇಲಾಖೆಗಳು ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು, ಆಗ ಮಾತ್ರ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಕೆಐಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಾರದಮ್ಮ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ತಹಶೀಲ್ದಾರ್ ದತ್ತಾತ್ರೇಯ ಜೆ ಗದ, ನಗರಸಭೆ ಆಯುಕ್ತ ರುದ್ರೇಶ್, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಅನಂತರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!