ಮಧುಗಿರಿ: ಆಭರಣದ ಸಾಲ ಮರು ಪಾವತಿ ಮಾಡಿದರು ಸಹ ಗ್ರಾಹಕರಿಗೆ ಆಭರಣವನ್ನು ಶಾಖಾ ವ್ಯವಸ್ಥಾಪಕಿ ವಾಪಸ್ ನೀಡದೆ ಅಗೌರವದೊಂದಿಗೆ ವರ್ತಿಸುತ್ತಿದ್ದಾರೆಂದು ಆರೋಪಸಿ ಗ್ರಾಮಸ್ಥರು ಬ್ಯಾಂಕ್ ನ ಮುಖ್ಯ ದ್ವಾರಕ್ಕೆ ಬೀಗ ಜಡಿದು ಪ್ರತಿಭಟಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿನ ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕಿ ಆಸ್ತಾ ಅವರು ಗುಜರಾತ್ ಮೂಲದವರಾಗಿದ್ದು ಗ್ರಾಹಕರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿಲ್ಲ, ಗ್ರಾಹಕರು ಏನಾದರೂ ಪ್ರಶ್ನೆ ಮಾಡಿದರೆ ಪದೇ ಪದೆ ಮೊಬೈಲ್ ತೆಗೆದು ವೀಡಿಯೋ ಮಾಡುವುದು, ಯಾರಿಗೆ ಬೇಕಾದರೂ ಹೇಳಿ ಕೊಳ್ಳಿ ಎನ್ನುವುದು, ನಾನು ಕನ್ನಡ ಭಾಷೆ ಮಾತನಾಡುವುದಿಲ್ಲ, ನನ್ನ ಬಳಿ ಮಾತನಾಡಬೇಕೆಂದರೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡಬೇಕು ಇಲ್ಲವಾದರೆ ಬ್ಯಾಂಕ್ ನಿಂದ ಹೊರ ಹೋಗಿ ಎಂದು ಗದರಿಸಿ ಕಳಿಸುತ್ತಿದ್ದಾರೆಂಬ ಗಂಭೀರ ಆರೋಪ ವ್ಯವಸ್ಥಾಪಕಿ ವಿರುದ್ಧ ಕೇಳಿ ಬಂದಿವೆ.
ಗ್ರಾಮದ ತಿಮ್ಮಣ್ಣ ಎನ್ನುವವರು ಬ್ಯಾಂಕ್ ನಲ್ಲಿ ಆಭರಣವನ್ನು ಅಡಮಾಡನ ಮಾಡಿದ್ದು ಆಕಾಲಿಕವಾಗಿ ಮೃತ ಪಟ್ಟಿದ್ದರು, ಪತ್ನಿ ಹಾಗೂ ಪುತ್ರ ಆಭರಣದ ಸಾಲದ ಮೊತ್ತ 1,73000 ರೂ. ಪಾವತಿ ಮಾಡಿ ಬ್ಯಾಂಕ್ ಗೆ ನೀಡಬೇಕಾಗಿದ್ದ ಅಗತ್ಯ ದಾಖಲೆಗಳನ್ನು ನೀಡಿದ್ದರು ಸಹ ಆಭರಣವನ್ನು ಸುಮಾರು ಒಂದು ತಿಂಗಳಿನಿಂದ ವಾಪಸ್ ನೀಡದೆ ಇಂಗ್ಲಿಷ್ ಭಾಷೆಯಲ್ಲಿ ಮನಸೋ ಇಚ್ಚೆ ಬೈದು ಕಳುಹಿಸುತ್ತಿದ್ದಾರೆ ಎಂದು ಮೃತ ತಿಮ್ಮಣ್ಣನ ಪತ್ನಿ ಲಕ್ಷಮ್ಮ, ಪುತ್ರ ರಘು ಆರೋಪಿಸಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು, ಪಂಚಾಯತಿ ಸದಸ್ಯರು ಬ್ಯಾಂಕ್ ಗೆ ಬೀಗ ಜಡಿದು ವ್ಯವಸ್ಥಾಪಕಿಯ ವಿರುದ್ಧ ಧಿಕ್ಕಾರ ಕೂಗಿದರು, ನಂತರ ಮಿಡಿಗೇಶಿ ಪೊಲೀಸರು ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಚಿರಂಜೀವಿ, ದೇವರಾಜ, ಮೆಹಬೂಬ್ ಪಾಷಾ, ದಿವ್ಯ ರವಿ,ರಂಗನಾಥ, ಪಾಂಡುರಂಗಯ್ಯ, ಶ್ರೀನಿವಾಸ, ಜಿಲಾನು, ರಘು, ಮಂಜುನಾಥ ಗೌಡ, ಕಾಂತರಾಜು ಹಾಜರಿದ್ದರು.
Comments are closed.