ಅತಿಥಿ ಉಪನ್ಯಾಸಕರಿಂದ ತಮಟೆ ಚಳವಳಿ

53

Get real time updates directly on you device, subscribe now.


ತುಮಕೂರು: ಸೇವೆ ಖಾಯಮಾತಿಗಾಗಿ ಮತ್ತು ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯು 26ನೇ ದಿನವೂ ಮುಂದುವರೆದಿದ್ದು, ಸರ್ಕಾರ ತಮ್ಮ ಸೇವೆ ಖಾಯಂಗೊಳಿಸುವಂತೆ ಆಗ್ರಹಿಸಿ ತಮಟೆ ಚಳವಳಿ ನಡೆಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು ತಮಟೆ ಭಾರಿಸುವ ಮೂಲಕ ನಿದ್ದೆಯಲ್ಲಿರುವ ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸವನ್ನು ಪ್ರತಿಭಟನಾಕಾರರು ಮಾಡಿದರು.

ಅತಿಥಿ ಉಪನ್ಯಾಸಕ ಡಾ.ವೆಂಕಟೇಶ್ ಮಾತನಾಡಿ, ಅತಿಥಿ ಉಪನ್ಯಾಸಕರು ಈ ರೀತಿ ಪ್ರತಿಭಟನಾ ಧರಣಿ 20 ವರ್ಷಗಳಿಂದ ಮಾಡುತ್ತಾ ಬಂದರೂ ಸರ್ಕಾರ ಮಾತ್ರ ನಮಗೆ ನ್ಯಾಯ ದೊರಕಿಸುವ ಯಾವುದೇ ಚಿಂತನೆ ಮಾಡಿಲ್ಲ, ನಮ್ಮ ಜೀವನದ ಸ್ಥಿತಿ, ನಮ್ಮ ಸಮಸ್ಯೆ ಗಂಭೀರವಾಗಿದ್ದು, ಸರ್ಕಾರ ನಮ್ಮ ಜೀವನ ಸ್ಥಿತಿ ಅರಿತುಕೊಂಡು ಸೇವೆ ಖಾಯಂ ಮಾಡಿದರೆ ಇರುವ ವರ್ಷಗಳಲ್ಲಿ ನೆಮ್ಮದಿಯಿಂದ ಬದುಕುತ್ತೇವೆ ಎಂದರು.
ಡಾ.ಹನುಮಂತರಾಯಪ್ಪ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಯನ್ನು ಏಕೆ ಜೀವಂತವಾಗಿ ಇರಿಸಿಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ, ಅತಿಥಿ ಉಪನ್ಯಾಸಕರಿಗೆ ಮಾತ್ರ 20 ದಶಕಗಳಿಂದ ಒಂದಲ್ಲ ಒಂದು ರೀತಿಯ ಶೋಷಣೆ, ದೌರ್ಜನ್ಯ, ಕಡಿಮೆ ವೇತನ, ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದಿರುವುದು, ಈ ರೀತಿಯಾಗಿ ನಮ್ಮನ್ನು ಶೋಷಣೆ ಮಾಡುತ್ತಲೇ ಬಂದಿವೆ, ಆಧುನಿಕ ಜೀವನ ಪದ್ಧತಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಬದುಕುವುದು ಕಷ್ಟ ಸಾಧ್ಯವಾಗಿದೆ, ಸಿದ್ದರಾಮಯ್ಯನವರ ಸರ್ಕಾರ 12,500 ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭಾಗ್ಯ ನೀಡಬೇಕು ಎಂದರು.

ಜಿಲ್ಲಾಧ್ಯಕ್ಷ ಡಾ.ಧರ್ಮವೀರ್ ಕೆ.ಎಚ್. ಮಾತನಾಡಿ, ರಾಜ್ಯ ಸರ್ಕಾರ ಮೂರ್ನಾಲ್ಕು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ವಿಧಾನ ಸೌಧದವರೆಗೆ ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದು, ಒಂದೆರಡು ದಿನಗಳಲ್ಲಿ ಇದರ ರೂಪುರೇಷೆ ಸಿದ್ಧಪಡಿಸಿ ಪಾದಯಾತ್ರೆ ಕೈಗೊಳ್ಳಲು ಸಿದ್ಧರಾಗಿದ್ದೇವೆ, ಈ ಪಾದಯಾತ್ರೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಅತಿಥಿ ಉಪನ್ಯಾಸಕರು ಪಾದಯಾತ್ರೆಯಲ್ಲಿ ಭಾಗವಹಿಸಲ್ಲಿದ್ದಾರೆ, ಸರ್ಕಾರ ಲಿಖಿತ ರೂಪದಲ್ಲಿ ನಮ್ಮ ಖಾಯಮಾತಿ ಆದೇಶ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ, ಇನ್ನೊಂದೆರಡು ದಿನ ಕಾದು ನಾವೆಲ್ಲರೂ ಪಾದಯಾತ್ರೆ ಪ್ರಾರಂಭಿಸುವದಾಗಿ ಅವರು ಸರ್ಕಾರಕ್ಕೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಶಶಿಧರ್.ಸಿ, ಶಿವಣ್ಣ ತಿಮ್ಮಲಾಪುರ, ಮಲ್ಲಿಕಾರ್ಜುನ್, ಗಿರಿಜಮ್ಮ, ನಟರಾಜು ಪುಟ್ಟರಾಜು, ನಾಗ ದೀಪ್ತಿ, ಮಮತಾ, ರಾಮಲಕ್ಷ್ಮಿ, ಸುನಿಲ್, ಯಶಸ್ವಿನಿ, ಸ್ವರೂಪ, ಕಾಂತರಾಜು, ಶಶಿಕುಮಾರ್, ಅನಿತಾ, ಶಂಕರ್ ಹಾರೋಗೆರೆ, ಸ್ಮಿತಾ, ರಮ್ಯ, ಗಿರೀಶ್, ವೇದಮೂರ್ತಿ, ಸಿದ್ದಲಿಂಗಯ್ಯ, ಮಹೇಶ್, ತೋಂಟರಾದ್ಯ, ಸುಧಾ, ಜ್ಯೋತಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!