ಕುಡಿವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಡೀಸಿ

142

Get real time updates directly on you device, subscribe now.


ಕೊರಟಗೆರೆ: ತಾಲ್ಲೂಕು ಚಿಕ್ಕಪಾಲನಹಳ್ಳಿ, ಧಮಗಲಯ್ಯನ ಪಾಳ್ಯ ಮತ್ತು ಬೋಳಬಂಡೆನ ಹಳ್ಳಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ ನೀಡಿ ಜಾನುವಾರು ಮೇವು ಬೆಳೆಗಳ ಕ್ಷೇತ್ರ ಪರಿಶೀಲನೆ, ಬರದ ಹಿನ್ನೆಲೆ ಟಾಸ್ಕ್ ಫೋರ್ಸ್ ಸಮಿತಿಯಿಂದ ಕೊರೆಸಿರುವ ಕೊಳವೆಬಾವಿ ಸ್ಥಳ ಪರಿಶೀಲನೆ ಮತ್ತು ಬರಗಾಲ ಪರಿಸ್ಥಿತಿಯಿಂದ ಉಂಟಾದ ಬೆಳೆ ನಷ್ಟ ಪರಿಶೀಲಿಸಿದರು.
ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ವಿಟ್ಟಾರಾವುತನ ಹಳ್ಳಿಗೆ ಮೊದಲಿಗೆ ಭೇಟಿ ನೀಡಿದ ಅವರು ರೈತ ದೊಡ್ಡಯ್ಯ ಮತ್ತು ದಾಸಪ್ಪ ಎಂಬುವವರ ರಾಗಿ ಹೊಲಕ್ಕೆ ಭೇಟಿ ನೀಡಿ ಹಾನಿಗೊಳಗಾದ ಬೆಳೆ ವೀಕ್ಷಿಸಿ ರೈತರಿಗೆ ಬೆಳೆ ಪರಿಹಾರ ತ್ವರಿತ ಗತಿಯಲ್ಲಿ ಒದಗಿಸುವಂತೆ ಸ್ಥಳದಲ್ಲಿ ಹಾಜರಿದ್ದ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತದ ನಂತರ ಕೋಳಾಲ ಹೋಬಳಿ ಚಿಕ್ಕಪಾಲನಹಳ್ಳಿ ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆಯಿಂದ ರಾಸುಗಳನ್ನು ಹೊಂದಿರುವ ರೈತರಿಗೆ ವಿತರಿಸಿದ ಉಚಿತ ಮೇವು ಬೀಜ ಬೆಳೆಗಳ ಕ್ಷೇತ್ರ ಪರಿಶೀಲನೆ ನಡೆಸಿದ ಅವರು ರೈತರಿಗೆ ಮೇವಿನ ಕಿಟ್ ಗಳನ್ನು ಕಾಲಮಿತಿಯೊಳಗಾಗಿ ಸಮರ್ಪಕವಾಗಿ ವಿತರಣೆ ಮಾಡುವಂತೆ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಚಿಕ್ಕಪಾಲನಹಳ್ಳಿ ಗ್ರಾಮದ ಕೆರೆಯ ನೀರನ್ನು ಅನಧಿಕೃತವಾಗಿ ಜಮೀನುಗಳಿಗೆ ಹರಿಸಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಕೊರಟಗೆರೆ ತಾಲ್ಲೂಕಿಗೆ ಮೊದಲ ಹಂತದಲ್ಲಿ 6500 ಮೇವಿನ ಕಿಟ್ ಗಳು ಬಂದಿದ್ದು, ಅವುಗಳನ್ನು ಅರ್ಹ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲಾಗಿದೆ, ಎರಡನೇ ಹಂತದಲ್ಲಿ 1000 ಮೇವಿನ ಕಿಟ್ ಗಳು ಕಚೇರಿಗೆ ಬಂದಿದ್ದು, ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಈ ಸಂದರ್ಭ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಚನ್ನರಾಯನದುರ್ಗ ಹೋಬಳಿ ಧಮಗಲಯ್ಯನಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅವಲೋಕಿಸಿ ಟಾಸ್ಕ್ ಫೋರ್ಸ್ ವತಿಯಿಂದ ಕೊಳವೆಬಾವಿ ಕೊರೆಸಿರುವ ಸ್ಥಳ ಪರಿಶೀಲನೆ ಮಾಡಿದರು, ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು, ಕೊಳವೆ ಬಾವಿಗಳಲ್ಲಿ ಯಾವ ಪ್ರಮಾಣದಲ್ಲಿ ನೀರು ಇದೆ, ವಿದ್ಯುತ್ ಸಂಪರ್ಕ ವ್ಯವಸ್ಥೆ ಮತ್ತು ಪೈಪ್ ಲೈನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ ಗ್ರಾಮವಾರು ವರದಿ ನೀಡುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದಲ್ಲಿ ಖಾಸಗಿ ಒಡೆತನದ ಬೋರ್ವೆಲ್ ಗಳನ್ನು ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡು ನೀರನ್ನು ಪೂರೈಕೆ ಮಾಡಬೇಕು, ನಂತರ ಕೊಳವೆ ಬಾವಿಗಳನ್ನು ಕೊರೆಸಬೇಕೆಂದು ಸೂಚಿಸಿದರು.
ಕಸಬಾ ಹೋಬಳಿ ಬೋಳಬಂಡೆನಹಳ್ಳಿ ಗ್ರಾಮದಲ್ಲಿ ಬರಗಾಲ ಪರಿಸ್ಥಿತಿಯಿಂದ ಉಂಟಾದ ಬೆಳೆ ನಷ್ಟವಾಗಿರುವ ಜಮೀನು ಪರಿಶೀಲನೆ ನಡೆಸಿದರು, ತಾಲ್ಲೂಕಿನಲ್ಲಿ ಶೇಕಡಾ 23ರಷ್ಟು ಮಳೆ ಕೊರತೆಯಾಗಿದೆ ಹಾಗೂ ಶೇಕಡಾ 90ರಷ್ಟು ಬೆಳೆ ನಷ್ಟವಾಗಿದೆ ಎಂದು ರೈತರೊಬ್ಬರು ತಿಳಿಸಿದರು.

ಈ ಸಂದರ್ಭದಲ್ಲಿ ಪಶು ಸಂಗೋಪನೆ ಉಪ ನಿರ್ದೇಶಕ ಡಾ.ಗಿರೀಶ್ಬಾಬು ರೆಡ್ಡಿ, ತಹಶೀಲ್ದಾರ್ ಮಂಜುನಾಥ್, ಕೃಷಿ ಇಲಾಖೆ ಉಪ ನಿರ್ದೇಶಕಿ ದೀಪಶ್ರೀ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!