ತುಮಕೂರು: ಪ್ರತಿಭಾ ಕಾರಂಜಿ ಎಂಬುದು ಮಕ್ಕಳ ಸಮಗ್ರ ವಿಕಾಸಕ್ಕೆ ಪೂರಕವಾದ ಕಾರ್ಯಕ್ರಮವಾಗಿದ್ದು, ಇಂದಿನ ಕಾರ್ಯಕ್ರಮ ನನ್ನ ಶಾಲಾ ದಿನಗಳನ್ನು ನೆನಪಿಸುತ್ತದೆ ಎಂದು ತುಮಕೂರು ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಪ್ರೌಢಶಾಲಾ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು 2023- 24 ನ್ನು ಉದ್ಘಾಟಿಸಿ ಮಾತನಾಡಿ, ಕ್ಲಸ್ಟರ್ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ, ಅಲ್ಲಿನ ಸ್ಪರ್ಧೆಯಲ್ಲಿ ಗೆಲುವು ಪಡೆದಂತಹ ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಬಂದಿದ್ದೀರಿ, ನಿಮಗೆಲ್ಲರಿಗೂ ಶುಭವಾಗಲಿ,ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೆಲುವು ಪಡೆದು, ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆಯ ರಂಗಧಾಮಯ್ಯ.ಸಿ. ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಳ್ಳೆಯ ವೇದಿಕೆಗಳಾಗಿವೆ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ಸಮಗ್ರ ವಿಕಾಶಕ್ಕೆ ಇಲಾಖೆ ಹೆಚ್ಚು ಒತ್ತು ನೀಡಿದ್ದು, ಈ ಅವಕಾಶ ಬಳಸಿ ಕೊಂಡು ಮಕ್ಕಳು ಉತ್ತಮ ಪ್ರದರ್ಶನ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಹೆಸರು ತರುವಂತೆ ಮಾಡಿ ಎಂದು ಸಲಹೆ ನೀಡಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದ ನೂಡಲ್ ಅಧಿಕಾರಿ ಲಾವಣ್ಯ.ಟಿ.ಜಿ. ಮಾತನಾಡಿ, ಮಕ್ಕಳ ಸಮಗ್ರ ವಿಕಾಸಕ್ಕೆ ಪೂರಕವಾಗಿರುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಚಿನ್ನನಾಯಕನ ಹಳ್ಳಿ ಮತ್ತು ಕುಣಿಗಲ್ ತಾಲೂಕುಗಳ ಸುಮಾರು 300ಕ್ಕು ಅಧಿಕ ವಿದ್ಯಾರ್ಥಿಗಳು ಭಾಗವಹಿಸುತಿದ್ದಾರೆ, ವೈಯಕ್ತಿಕ ವಿಭಾಗದಲ್ಲಿ ಸುಮಾರು 14 ಸ್ಪರ್ಧೆಗಳಲ್ಲಿ, ಸಮೂಹ ವಿಭಾಗದಲ್ಲಿ 4 ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ, ಇಲ್ಲಿ ಪ್ರಥಮ ಬಹುಮಾನ ಪಡೆಯುವ ಮಕ್ಕಳನ್ನು ರಾಜ್ಯಮಟ್ಟಕ್ಕೆ ಕರೆದುಕೊಂಡು ಹೋಗಲಾಗುವುದು, ಪ್ರತಿಭಾ ಪುರಸ್ಕಾರ ಮತ್ತು ಕಲೋತ್ಸವದ ಮೂಲಕ ಮಕ್ಕಳು ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಲಿ ಎಂಬುದು ಇದರ ಹಿಂದಿನ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಇನಾಯತ್ ವುಲ್ಲಾ ಖಾನ್, ಬಿಇಓ ಡಾ.ಸೂರ್ಯಕಲಾ, ನೋಡಲ್ ಅಧಿಕಾರಿ ಲಾವಣ್ಯ, ಶಿಕ್ಷಕರಾದ ಕೆ.ಕೃಷ್ಣಮೂರ್ತಿ, ಉಮಾದೇವಿ, ಲೋಕೇಶ್ ರೆಡ್ಡಿ, ತಿಮ್ಮೇಗೌಡ, ಹನುಮೇಶ್, ಪರಮೇಶ್ವರಪ್ಪ, ಉಮೇಶ್, ಟಿ.ಎಸ್.ಚಿಕ್ಕಣ್ಣ, ಮಹದೇವಯ್ಯ, ಸುರೇಶ್ ಮತ್ತಿತರು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಜಾನಪದ ಗೀತೆ, ಭಾವಗೀತೆ, ಕೋಲಾಟ, ವೇಷ ಭೂಷನ ಸ್ಪರ್ಧೆ ಮತ್ತಿತರರ ಸ್ಪರ್ಧೆಗಳಲ್ಲಿ ಭಾಗವಹಿಸಿ ಖುಷಿ ಪಟ್ಟರು.
Comments are closed.