ಸಿರಿಧಾನ್ಯಗಳಿಗೆ ವಿಶ್ವ ಮಾನ್ಯತೆ ಸಿಕ್ಕಿದೆ: ಸಿಇಒ

ತುಮಕೂರಿನಲ್ಲಿ ಕೃಷಿ ಇಲಾಖೆಯಿಂದ ಸಿರಿಧಾನ್ಯ ನಡಿಗೆ ಜಾಥಾ

59

Get real time updates directly on you device, subscribe now.


ತುಮಕೂರು: ಪ್ರಸ್ತುತ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡುತ್ತಿದೆ, ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು, ಅದೇ ರೀತಿ ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆಯೂ ಜಾಸ್ತಿಯಾಗಬೇಕಾಗಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕೃಷಿ ಇಲಾಖೆಯ ಸಿರಿಧಾನ್ಯ ನಡಿಗೆ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ವಿಶ್ವವ್ಯಾಪಿಯಾಗಿ ಸಿರಿಧಾನ್ಯಗಳಿಗೆ ಇರುವ ಶಕ್ತಿ ಯಾವ ಆಹಾರ ಪದಾರ್ಥಗಳಿಗೆ ಇಲ್ಲ ಎಂಬುದನ್ನು ಸಮ್ಮತಿಸಲಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವ ವಿಸ್ತೀರ್ಣದ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ ಎಂದರು.
ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಬಳಕೆ ಏರುಗತಿಯಲ್ಲಿದೆ, ಇದು ಇನ್ನು ಹೆಚ್ಚಾಗಬೇಕು, ಯುವಕರು, ನಾಗರಿಕರು ಇದನ್ನು ಮೂಲ ಆಹಾರ ಎಂಬಂತೆ ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು.
ರಾಗಿ, ಆರ್ಕ, ಸಜ್ಜೆ, ನವಣೆ, ಸಾಮೆ, ಬರಗಲು ಸೇರಿದಂತೆ ಅನೇಕ ಸಿರಿಧಾನ್ಯಗಳನ್ನು ವೈವಿಧ್ಯತೆಯಿಂದ ಬೆಳೆಯುತ್ತಿರುವುದು ನಮ್ಮ ದೇಶ ಮಾತ್ರ, ಪರಂಪರಗತವಾಗಿ ಬಂದಿರುವ ಆಹಾರ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕಾಗಿದೆ, ಕೊಂಡುಕೊಳ್ಳಲು ಇಲ್ಲದೇ ರೈತರು ಬೇರೆ ಬೆಳೆಗಳತ್ತ ಹೋಗುವ ಸ್ಥಿತಿ ಇದೆ ಎಂದರು.

ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ-2023 ವಿಶ್ವಸಂಸ್ಥೆಯನ್ನು ಅನೇಕ ರಾಷ್ಟ್ರಗಳು ಸರ್ವ ಸಮ್ಮತವಾಗಿ ಒಪ್ಪಿ ಭಾರತದ ಪ್ರಸ್ತಾವನೆಯನ್ನು ಅಂಗೀಕರಿಸಿ ನಮ್ಮ ಸಿರಿಧಾನ್ಯಗಳಿಗೆ ವಿಶ್ವಮಾನ್ಯತೆ ಕೊಟ್ಟ ವರ್ಷವಾಗಿದೆ ಎಂದ ಅವರು ನೀರಾವರಿ ವ್ಯವಸ್ಥೆ ಕಡಿಮೆ ಇರುವ ಪ್ರದೇಶಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಸಿರಿಧಾನ್ಯ ಬೆಳೆಸುವ ಮೂಲಕ ಆರ್ಥಿಕ ಚೈತನ್ಯ ಕೊಡುವ ಕೆಲಸ ಮಾಡಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ದೃಷ್ಟಿಯಿಂದ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆಯುವ ರೈತರ ಸಂಖ್ಯೆ ಜಾಸ್ತಿಯಾಗುತ್ತಿದೆ, ಅದೇ ರೀತಿ ಬಳಸುವವರ ಸಂಖ್ಯೆಯೂ ಸಹ ಜಾಸ್ತಿಯಾಗುತ್ತಿದೆ ಎಂದರು.
ಈ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ಬಹಳಷ್ಟಿದೆ, ಹಾಗೆಯೇ ರೈತರು, ನಾಗರಿಕರಿಗೂ ಸಿರಿಧಾನ್ಯ ಬೆಳೆಯುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ, ಈ ಜಾಗೃತಿ ಅಭಿಯಾನ ನಾಗರಿಕರಿಗೆ ತಲುಪಬೇಕು, ಹೆಚ್ಚು ನಾಗರಿಕರು ಸಿರಿಧಾನ್ಯ ಬಳಸುವಂತಾಗಬೇಕು ಎಂದ ಅವರು ಸಿರಿಧಾನ್ಯ ಬಳಕೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಇನ್ನೊಂದು ವಾರದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವರು ಈ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಕೃಷಿ ಜಂಟಿ ನಿರ್ದೇಶಕ ರಮೇಶ್ ಮಾತನಾಡಿ, ಸಿರಿಧಾನ್ಯ ಮೇಳದ ಅಂಗವಾಗಿ ಸಿರಿಧಾನ್ಯ ನಡೆ ನಡೆಸಲಾಗುತ್ತಿದೆ, ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಎಲ್ಲ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿ ನಡಿಗೆ ಜಾಥಾ ಹಮ್ಮಿಕೊಂಡಿದ್ದು, ಸಿರಿಧಾನ್ಯದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಈ ನಡಿಗೆಯದ್ದಾಗಿದೆ ಎಂದರು.
ಜ. 5, 6, 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಯುತ್ತಿದೆ, ಇದರ ಅಂಗವಾಗಿ ಈ ನಡಿಗೆ ಆಯೋಜನೆ ಮಾಡಲಾಗಿದೆ, ಸಾರ್ವಜನಿಕರು ಹೆಚ್ಚು ಹೆಚ್ಚು ಸಿರಿಧಾನ್ಯ ಬಳಕೆ ಮಾಡುವಂತೆ ಅರಿವು ಮೂಡಿಸುವ ಕೆಲಸ ಮಾಡುವುದು ಇದರ ಪ್ರಮುಖ ಧ್ಯೇಯವಾಗಿದೆ ಎಂದರು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಹೊರಟ ಸಿರಿಧಾನ್ಯ ನಡಿಗೆ ಜಾಥಾ ಅಶೋಕ ರಸ್ತೆ, ಟೌನ್ಹಾಲ್ ಮುಖೇನ ಬಿ.ಹೆಚ್.ರಸ್ತೆಯಲ್ಲಿ ಸಾಗಿ ಜೂನಿಯರ್ ಕಾಲೇಜು ಮೈದಾನ ತಲುಪಿತು.
ಈ ಸಿರಿಧಾನ್ಯ ನಡಿಗೆ ಜಾಥಾದಲ್ಲಿ ಕೃಷಿ ಉಪ ನಿರ್ದೇಶಕರಾದ ಅಶೋಕ್, ದೀಪಶ್ರೀ, ಸಹಾಯಕ ನಿರ್ದೇಶಕರಾದ ಅಶ್ವತ್ಥ್ ನಾರಾಯಣ, ಹನುಮಂತರಾಯಪ್ಪ, ನಿರ್ಮಿತಿ ಕೇಂದ್ರದ ರಾಜಶೇಖರ್, ಸಾವಯವ ಕೃಷಿ ಅಧ್ಯಕ್ಷ ಗೋವಿಂದರಾಜು, ವಿವೇಕಾನಂದ ಶಾಲೆ, ಎಂಪ್ರೆಸ್ ಶಾಲೆ ಹಾಗೂ ಆರ್ಯನ್ ಹೈಸ್ಕೂಲ್ ವಿದ್ಯಾರ್ಥಿಗಳು, ಕೃಷಿ ಇಲಾಖೆ ಅಧಿಕಾರಿಗಳು, ರೈತರು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!