ಕುಣಿಗಲ್: ದೇಹದ ಖಾಯಿಲೆಗೆ ಆಸ್ಪತ್ರೆ, ವೈದ್ಯರು ಔಷಧ ನೀಡಿದರೆ, ಮನಸಿನ ಖಾಯಿಲೆಯ ನಿವಾರಣೆಗೆ ಸಾಹಿತಿ ರಚಿಸಿದ ಉತ್ತಮ ಸಾಹಿತ್ಯ ಓದುವುದು ಔಷಧವಿದ್ದಂತೆ ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಮಂಗಳವಾರ ಪಟ್ಟಣದಲ್ಲಿ ಸಾಹಿತಿ ಪ್ರಕಾಶಕ ಸೊಂದಲಗೆರೆ ಲಕ್ಷ್ಮೀಪತಿ ತಮ್ಮ ತಂದೆ ತಾಯಿಯ ನೆನಪಲ್ಲಿ 30ಲಕ್ಷರೂ. ವೆಚ್ಚದಲ್ಲಿ ನಿರ್ಮಿಸಿರುವ ಮಲ್ಲಮ್ಮ ಪಟೇಲ್ ನಾರಸಿಗೌಡ ಕನ್ನಡ ಸಾಹಿತ್ಯ ಭವನ ಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಾನಸಿಕ ಖಾಯಿಲೆಗಳು ಗಂಭೀರವಾಗುವ ಮುನ್ನ ಉತ್ತಮ ಸಾಹಿತ್ಯ ಓದುವ ಮೂಲಕ ಗುಣಪಡಿಸಿ ಕೊಳ್ಳಬಹುದು, ಮನೆಯಲ್ಲಿ ಹಿರಿಯರು ಸಾಹಿತ್ಯ ಪುಸ್ತಕ ಓದುವ ಸದಭಿರುಚಿಯನ್ನು ತಮ್ಮ ಮಕ್ಕಳಿಗೂ ಕಲಿಸುವ ಮೂಲಕ ಅವರನ್ನು ಸಾಹಿತ್ಯಾಸಕ್ತರನ್ನಾಗಿಸಿ ಜೀವನದ ಯಾವುದೇ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮಾನಸಿಕ ಧೈರ್ಯ, ಸ್ಥೈರ್ಯ ತುಂಬಬೇಕು, ಸಾಹಿತ್ಯದ ಸಮಗ್ರ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ನ ಗ್ರಂಥಾಲಯ, ಸಭಾ ಭವನಗಳು ಪೂರಕವಾಗಿ ಕೆಲಸ ಮಾಡುವ ಮೂಲಕ ಜನರನ್ನು ಸಾಹಿತ್ಯಾಸಕ್ತರನ್ನಾಗಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಾಲಯದ ಗರ್ಭ ಗುಡಿಯಲ್ಲಿ ಒಬ್ಬದೇವರ ಕಂಡರೆ ಗ್ರಂಥಾಲಯದ ಪುಸ್ತಕದಲ್ಲಿ ಅಂಥಹ ನೂರು ದೇವರ ನೋಡಬಹುದು, ಸಾಹಿತಿ ನಶ್ವರವಾದರೂ ಸಾಹಿತಿ ರಚಿಸಿದ ಸಾಹಿತ್ಯ ಶಾಶ್ವತವಾಗಿ ಚಿರಂಜೀವಿಯಾಗಿರುತ್ತದೆ, ಕವಿ ಮನಸು ಜೀವನದ ಆಳ,ಅಗಲಗಳನ್ನು ಸಮಾಜದ ಎಲ್ಲಾ ರೀತಿಯ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಸಾಮಾನ್ಯ ಜನರಿಗೆ ಅರ್ಥವಾಗುವ ಸುಲಭ ಭಾಷೆಯಲ್ಲಿ ತಿಳಿ ಹೇಳುತ್ತಾನೆ ಎಂದರು.
ಸಚಿವ ಡಿ.ಸುಧಾಕರ್ ಮಾತನಾಡಿ, ಕನ್ನಡ ಸಾಹಿತ್ಯ ಭವನ ತಾಲೂಕು ಮಟ್ಟದಲ್ಲಿ ಉದ್ಘಾಟನೆಯಾಗುತ್ತಿರುವುದು ಸಂತಸ, ರಾಜ್ಯದಲ್ಲಿ ಹಲವು ಕಾರಣಗಳಿಂದಾಗಿ ಕನ್ನಡಿಗರೆ ಅಲ್ಪ ಸಂಖ್ಯಾತರಾಗುವ ಮಟ್ಟಿಗೆ ಸನ್ನಿವೇಶ ಸೃಷ್ಟಿಯಾಗುತ್ತಿದೆ, ಇಂತಹ ಬೆಳವಣಿಗೆಗಳ ಮಧ್ಯೆ ಕನ್ನಡ ಸಾಹಿತ್ಯ ಭವನದಂತಹ ವೇದಿಕೆಗಳು ಕನ್ನಡದ ಮನಸುಗಳನ್ನು ಸಂಘಟಿತಗೊಂಡು ಕನ್ನಡ ಭಾಷೆ, ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ರಂಗನಾಥ್ ಮಾತನಾಡಿ, ಯುವ ಜನತೆ ಬದಲಾದ ಆಧುನಿಕತೆಯ ತಂತ್ರಜ್ಞಾನದ ವೇದಿಕೆಯಿಂದಾಗಿ ಕನ್ನಡ ಭಾಷೆ, ಸಾಹಿತ್ಯದಿಂದ ದೂರಾಗುವ ಸನ್ನಿವೇಶ ನಿರ್ಮಾಣವಾಗಿದೆ, ಸಾಹಿತಿಗಳು ಯುವ ಜನತೆಯನ್ನು ಲಭ್ಯವಿರುವ ತಂತ್ರಜ್ಞಾನ ಬಳಸಿಕೊಂಡು ಯುವ ಜನತೆ ಕನ್ನಡ ಸಾಹಿತ್ಯದ ಬಗ್ಗೆ ಒಲವು ತೋರಲು ಶ್ರಮಿಸಬೇಕಿದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಕುಣಿಗಲ್ ತಾಲೂಕು ಮೊದಲಿನಿಂದಲೂ ಕನ್ನಡಭಾಷೆ, ಸಾಹಿತ್ಯ, ಸಂಸ್ಕೃತಿಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ, ಇದೀಗ ಸಾಹಿತ್ಯ ಭವನದ ಉದ್ಘಾಟನೆಯಾಗುವ ಮೂಲಕ ಸಾಹಿತ್ಯ, ಕನ್ನಡದ ಕೆಲಸಗಳು ಮತ್ತಷ್ಟು ಹೆಚ್ಚಲು ಸಹಕಾರಿಯಾಗಿದೆ ಎಂದರು.
ಭವನದ ನಿರ್ಮಾತೃ ಸೊಂದಲಗೆರೆ ಲಕ್ಷ್ಮೀಪತಿ ದಂಪತಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಸಾಹಿತಿ ಮುಕುಂದರಾಜ್ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ತಾಲೂಕು ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ, ಬಿಇಒ ಬೋರೇಗೌಡ, ಪುರಸಭೆ ಸದಸ್ಯ ನಾಗೇಂದ್ರ, ಶ್ರೀನಿವಾಸ, ದೇವರಾಜ, ಕರವೇ ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಕೆ.ಎಲ್.ಹರೀಶ್, ಹುಚ್ಚೇಗೌಡ, ವರದರಾಜು, ಗಾಯಿತ್ರಿ ರಾಜು, ದಿನೇಶ ಕುಮಾರ್, ಕುಮಾರ, ನಾರಾಯಣ, ಉಮೇಶ್, ಶಿವರಾಮಯ್ಯ ಇತರರು ಇದ್ದರು.
Comments are closed.