ರಕ್ತ ಕೊಟ್ಟು ಖಾಯಮಾತಿಗೆ ಉಪನ್ಯಾಸಕರ ಪಟ್ಟು

55

Get real time updates directly on you device, subscribe now.


ತುಮಕೂರು: ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂಬ ಧ್ಯೇಯ ವಾಕ್ಯದೊಂದಿಗೆ ಅತಿಥಿ ಉಪನ್ಯಾಸಕರು 27ನೇ ದಿನವೂ ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಠಾವಧಿ ಧರಣಿ ಮುಂದುವರೆಸಿರುವ ಅತಿಥಿ ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ, ರಕ್ತ ಕೊಟ್ಟೆವು ಖಾಯಂಯಾತಿ ಬಿಡೆವು ಎಂದು ಘೋಷಣೆ ಕೂಗುತ್ತಾ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಈ ವೇಳೆ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್. ಮಾತನಾಡಿ, ಸುಮಾರು 20 ವರ್ಷಗಳಿಂದ ಸರ್ಕಾರ ನಮ್ಮ ರಕ್ತ ಹೀರುತ್ತಿದೆ, ನಾವು ಸರ್ಕಾರಕ್ಕೆ ರಕ್ತಕೊಟ್ಟೆವು, ಖಾಯಂಯಾತಿ ಬಿಡುವುದಿಲ್ಲ, ಖಾಯಂ ಆಗುವ ವರೆಗೂ ನಮ್ಮ ಹೋರಾಟ ನಿಲ್ಲದು, ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತಿಸುತ್ತಿರುವುದು ನಮ್ಮನ್ನು ಆತಂಕ್ಕೀಡು ಮಾಡಿದೆ, ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿಯವರು ನಿರಂತರ ಸಂಪರ್ಕದಲ್ಲಿದ್ದು ಇನ್ನೊಂದೆರಡು ದಿನಗಳಲ್ಲಿ ತುಮಕೂರಿಂದ ಪಾದಯಾತ್ರೆ ಆರಂಭವಾಗಲಿದೆ, ಎಲ್ಲಾ ಅತಿಥಿ ಉಪನ್ಯಾಸಕರು ಪಾದಯಾತ್ರೆಗೆ ಸಿದ್ಧಗೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರಿಗೆ ಕರೆ ಕೊಟ್ಟ ಅವರು ಸರ್ಕಾರವನ್ನು ಕಣ್ತೆರಿಸುವಂತೆ ಮಾಡಲು ನಾವು ಪಾದಯಾತ್ರೆ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ಉಪನ್ಯಾಸಕರಿಗೆ ಕೇವಲ ವಿದ್ಯಾದಾನ ಮಾಡುವುದಷ್ಟೇ ಗೊತ್ತಿಲ್ಲ, ರಕ್ತದಾನ ಮಾಡುವುದು ನಮಗೆ ಗೊತ್ತು, ಕಳೆದ ಒಂದು ತಿಂಗಳಿಂದ ವಿವಿಧ ರೀತಿಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ, ಇಂದು ರಕ್ತದಾನ ಮಾಡುವ ಮೂಲಕ ನಾವು ಪ್ರತಿಭಟನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ, ಜೊತೆಗೆ ಪಾದಯಾತ್ರೆ ಮಾಡಲು ಸಿದ್ಧರಾಗಿದ್ದೇವೆ, ಹೀಗೆ ನಾವು ವಿವಿಧ ರೀತಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಮಾತ್ರ ಬಾಯಿ ಬಿಡದೆ ಮೂಕನಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಏನೇ ಆದರೂ ನಾವು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವ ವರೆಗೂ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಹೇಳಿದರು.

ಹಿರಿಯ ಉಪನ್ಯಾಸಕ ಡಾ. ಕಂಚಿಗರಾಯಪ್ಪ ಮಾತನಾಡಿ, ಯುಜಿಸಿ ನಿಯಮಾವಳಿಗಳ ಪ್ರಕಾರ ಎಲ್ಲಾ ಅರ್ಹತೆಗಳಿದ್ದರೂ ನಮಗೆ ಸರ್ಕಾರದ ಕೆಲಸ ಸಿಗದೇ 55 ವರ್ಷ ಪೂರೈಸಿದ್ದೇನೆ, ಇನ್ನುಳಿದ ಕೊನೆಯ ದಿನಗಳಲ್ಲಾದರೂ ನೆಮ್ಮದಿಯ ಜೀವನ ಮಾಡಲು ಸರ್ಕಾರ ನಮ್ಮನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ನಿರ್ಮಲ.ಜಿ, ಕೃಷ್ಣಗೌಡ, ಡಾ.ಸುರೇಶ್, ಕೃಷ್ಣಗೌಡ.ಟಿ.ಎಸ್, ಡಾ.ಮನು, ನರಸಿಂಹ, ಶಂಕರ್ ಹಾರೋಗೆರೆ, ಮೂರ್ತಿ, ಆನಂದ್, ಮೋಹನ್ ಕುಮಾರ್, ಪುಟ್ಟರಾಜು, ತಿಪ್ಪೇಸ್ವಾಮಿ, ಸುನಿಲ್ ಕುಮಾರ್.ಆರ್, ರಶ್ಮಿ .ಜಿ.ಎಸ್, ಪುಜಾ.ಆರ್, ಲತಾ.ಹೆಚ್, ಹರ್ಷ.ವೈ.ಸಿ, ತೇಜಸ್ವಿನಿ, ನಾರಾಯಣಪ್ಪ ಇನ್ನಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!