ಆರ್ಥಿಕತೆ ಸದೃಢತೆಗೆ ವಿನಿಮಯ ಪದ್ಧತಿ ಅಗತ್ಯ

59

Get real time updates directly on you device, subscribe now.


ತುಮಕೂರು: ಜಿಲ್ಲೆಯ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಮೂಲ ಕಾರಣ ಸಹಕಾರಿ ಬ್ಯಾಂಕ್ ಗಳು, ವಿನಿಮಯ ಪದ್ಧತಿಯಿಂದ ಆರ್ಥಿಕತೆ ಬಲಪಡಿಸುವ ಸಹಕಾರಿ ಸಂಘಗಳು ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗವು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಯಮಿತ ಸಹಯೋಗದೊಂದಿಗೆ ಮಂಗಳವಾರ ಆಯೋಜಸಿದ್ದ ಸ್ನಾತಕ ಮತ್ತು ಸ್ನಾತೋಕೊತ್ತರ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜ್ಞಾನಾರ್ಜನೆ ಎಲ್ಲಾ ವಿಷಯಗಳಲ್ಲೂ ಆಗಬೇಕು, ವಿಭಾಗಗಳ ನಡುವಣ ವಿಷಯ ವಿನಿಮಯ ಕೂಡ ಸಹಕಾರವೆ, ಚರ್ಚೆಗಳಿಂದ ವಿಷಯದ ವಿವಿಧ ಆಯಾಮ ಕಾಣಬಹುದು, ಸೃಜನಾತ್ಮಕ ಕಲ್ಪನೆ ಹುಟ್ಟುತ್ತವೆ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರವಾಗುವ ಕಾರ್ಯ ಕೈಗೊಳ್ಳಲು ಪ್ರೇರೇಪಿಸುತ್ತವೆ, ಬಲವಾದ ಗುರಿಯಿದ್ದಾಗ ಸರಿಯಾದ ತಯಾರಿ ಇರುತ್ತದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಅಧ್ಯಕ್ಷಬಿ.ಜಿ. ವೆಂಕಟೇಗೌಡ ಮಾತನಾಡಿ, 45,000 ಕ್ಕೂ ಹೆಚ್ಚು ಸಹಕಾರ ಸಂಘಗಳು ನಮ್ಮ ದೇಶದಲ್ಲಿವೆ, ಆರ್ಥಿಕ ಸಬಲತೆಯನ್ನು ಬಡಜನರಿಗೆ ನೀಡುತ್ತಿವೆ, ಶಾಲಾ- ಕಾಲೇಜು ಪಠ್ಯಗಳಲ್ಲಿ ಸಹಕಾರ ವಿಷಯ ಅಳವಡಿಸಬೇಕು, ನೇರವಾಗಿ ಸಹಾಯ ಮಾಡಲು ಸಾಧ್ಯವಾಗುವ ಏಕೈಕ ಕ್ಷೇತ್ರವಿದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಸಂಘವಿದು ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ನಿಗಮದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ 2024 ಸಹಕಾರ ಸಂಘಗಳಿವೆ, ಅದರಲ್ಲಿ 1324 ಹಾಲು ಉತ್ಪಾದಕರ ಸಂಘಗಳು, 236 ಕೃಷಿ ಪತ್ತಿನ ಸಹಕಾರ ಸಂಘಗಳು, 11 ಪಟ್ಟಣ ಪತ್ತಿನ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ, ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಕೇಂದ್ರ ಬ್ಯಾಂಕ್ ಗಳು ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಾಯ ಮಾಡುತ್ತಿವೆ ಎಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಸಮಾನ ನಷ್ಟ ಮತ್ತು ಲಾಭ ಹೊಂದಿರುವ ಸಹಕಾರ ಸಂಘಗಳನ್ನು ಸ್ಥಾಪಿಸುವುದು ದೇಶಕ್ಕೆ ಅನುಕೂಲಕರವಾಗಿದೆ, ರೈತೋತ್ಪನ್ನಗಳು, ಸಣ್ಣ ಕೈಗಾರಿಕೆ, ಸಹಕಾರಿ ಬ್ಯಾಂಕ್ ಗಳು, ಕೃಷಿ, ಮಾರುಕಟ್ಟೆ, ತಯಾರಿಕ, ಬೀಜ, ಸಾವಯವ ಕ್ಷೇತ್ರದಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ, ತಿದ್ದುಪಡಿ 97ರಲ್ಲಿ ಅನುಮೋದನೆಗೊಂಡಿರುವ ಸಹಕಾರಿ ಸಂಘಗಳು ಸಾಂವಿಧಾನಿಕ ಹಕ್ಕು ಪಡೆದು ದೇಶದ ಅಭಿವೃದ್ಧಿಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಿವೆ ಎಂದರು.
ವಿಭಾಗ ಮಟ್ಟದ ಚರ್ಚಾ ವಿಷಯವಾಗಿ ಸ್ನಾತಕ ವಿದ್ಯಾರ್ಥಿಗಳಿಗೆ ಮಹಿಳೆಯರು ಮತ್ತು ಯುವ ಜನರು ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರವೇ ರಾಷ್ಟ್ರದ ಅರ್ಥ ವ್ಯವಸ್ಥೆ ಬಲಗೊಳಿಸಲು ಸಾಧ್ಯ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರಾಷ್ಟ್ರದಲ್ಲಿ ಬಡತನ ನಿವಾರಣೆ, ಉದ್ಯೋಗ ಸೃಷ್ಟಿ ಹಾಗೂ ಸಮಾನತೆ ಸಾಧಿಸಲು ಸಹಕಾರ ಚಳವಳಿಯ ಬೆಳವಣಿಗೆಯಿಂದ ಮಾತ್ರವೇ ಸಾಧ್ಯ ವಿಷಯದ ಕುರಿತು ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪರ- ವಿರೋಧದ ಚರ್ಚೆ ಮಂಡಿಸಿದರು.

ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ.ಜಿ. ಬಸವರಾಜ, ಕಲಾ ನಿಕಾಯದ ಡೀನ್ ಪ್ರೊ.ಎಚ್.ಕೆ.ಶಿವಲಿಂಗ ಸ್ವಾಮಿ, ವಿವಿ ಹಣಕಾಸು ಅಧಿಕಾರಿ ಪ್ರೊ.ಪಿ.ಪರಮಶಿವಯ್ಯ, ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಮಹಾಲಿಂಗ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!