ತುಮಕೂರು: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 28 ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಶೂ ಮತ್ತು ಚಪ್ಪಲಿಯನ್ನು ಪಾಲಿಷ್ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಹನೆ ಹೊರ ಹಾಕಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿರುವ ಅತಿಥಿ ಉಪನ್ಯಾಸಕರನ್ನು ಶೂ ಮತ್ತು ಚಪ್ಪಲಿ ಪಾಲಿಷ್ ಮಾಡುವಷ್ಟರ ಮಟ್ಟಕ್ಕೆ ನಮ್ಮನ್ನು ನಡೆಸಿಕೊಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿನಿತ್ಯವೂ ಒಂದಿಲ್ಲೊಂದು ರೀತಿ ವಿಭಿನ್ನ, ವಿನೂತನವಾಗಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರೂ ಸರ್ಕಾರ ಮಾತ್ರ ತಮ್ಮ ಸಮಸ್ಯೆಗಳತ್ತ ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನಾ ನಿರತ ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಡಾ.ಶಿವಣ್ಣ ತಿಮ್ಲಾಪುರ ಮಾತನಾಡಿ, ರಾಜ್ಯ ಸರ್ಕಾರ ಉಪನ್ಯಾಸಕರನ್ನು ಶೂ ಪಾಲಿಷ್ ಮಾಡಿ ಪ್ರತಿಭಟನೆ ಮಾಡುವಷ್ಟರ ಮಟ್ಟಿಗೆ ನಡೆಸಿಕೊಳ್ಳಬಾರದಿತ್ತು, ಸರ್ಕಾರದ ನಡೆ ಖಂಡನೀಯ, ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಸೇವೆ ಖಾಯಮಾತಿ ಮಾಡದಿದ್ದರೆ ಈ ರೀತಿಯ ಹೋರಾಟಗಳು ನಿರಂತರವಾಗಿ ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕ ಶಶಿಧರ್.ಸಿ. ಮಾತನಾಡಿ, ಕಳೆದ 28 ದಿನಗಳಿಂದ ಅತಿಥಿ ಉಪನ್ಯಾಸಕರ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಾ ಬರುತ್ತಿದ್ದರೂ ರಾಜ್ಯ ಸರ್ಕಾರಕ್ಕೆ 12 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆ ಬಹಳ ದೊಡ್ಡದಾಗಿ ಕಾಣಿಸುತ್ತಿದೆ, ನಮ್ಮ ಈ ಸಮಸ್ಯೆ ದೊಡ್ಡದಾದರೆ ಇನ್ನು ರಾಜ್ಯದ ಸಮಸ್ಯೆಗಳನ್ನು ಸರ್ಕಾರ ಯಾವ ರೀತಿ ಪರಿಹರಿಸುತ್ತದೆ ಎಂದು ಪ್ರಶ್ನಿಸಿದರು.
ಕೇವಲ 12 ಸಾವಿರ ಅತಿಥಿ ಉಪನ್ಯಾಸಕರ ಸೇವೆ ಖಾಯಮಾತಿ ಸಮಸ್ಯೆಯನ್ನು ಒಂದು ತಿಂಗಳಿನಿಂದ ಬಗೆಹರಿಸದೆ ನಮ್ಮನ್ನು ಬೀದಿಯಲ್ಲಿ ಬಿಟ್ಟು ವಿದ್ಯಾರ್ಥಿಗಳನ್ನು ತರಗತಿ ಇಲ್ಲದೆ ಅನಾಥರನ್ನಾಗಿ ಮಾಡುತ್ತಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್. ಮಾತನಾಡಿ, ಇಂದು ಶೂ ಮತ್ತು ಚಪ್ಪಲಿ ಪಾಲಿಷ್ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ತಮ್ಮ ಒತ್ತಾಯ ತಿಳಿಸಿದ್ದೇವೆ, ಇನ್ನು ಯಾವ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿ ನಮ್ಮ ಆಕ್ರೋಶ ಹೊರ ಹಾಕಬೇಕು ಎಂಬುದು ತಿಳಿಯುತ್ತಿಲ್ಲ, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಾ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಮಾತಿ ಮಾಡಬೇಕೆಂದು ಸರ್ಕಾರವನ್ನು ಕಳೆದ 30 ದಿನಗಳಿಂದ ಒತ್ತಾಯಿಸುತಿದ್ದೇವೆ, ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಭರವಸೆ ಕೊಡದೆ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸದೆ ಇರುವುದು ದುರ್ದೈವದ ಸಂಗತಿ, ತಕ್ಷಣ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ.ಮಲ್ಲಿಕಾರ್ಜುನ್.ಎಂ.ಟಿ, ರೇಣುಕಾ, ಮಹಾಲಕ್ಷ್ಮಿ, ರಾಮಲಕ್ಷ್ಮಿ, ಅಂಬಿಕಾ, ಶಿವಲಿಂಗಯ್ಯ, ಆನಂದ್, ಶ್ರೀನಿವಾಸ್ ಗಂಗಾತನಯ, ಕಾಂತರಾಜು, ನಟರಾಜು, ರಘುನಾಥ್, ಶಂಕರ ಹಾರೋಗೆರೆ, ಮೂರ್ಖಣ್ಣಪ್ಪ, ಹನುಮಂತರಾಯಪ್ಪ.ಎಚ್. ಇನ್ನಿತರರು ಭಾಗವಹಿಸಿದ್ದರು.
Comments are closed.