ಸಹಾಯವಾಣಿ ಕಾರ್ಯಾವಧಿ ವಿಸ್ತರಿಸಿ: ಮಣಿವಣ್ಣನ್

ಕರೆ ಮಾಡುವ ನಾಗರಿಕರಿಗೆ ಸರಿಯಾಗಿ ಚುನಾವಣಾ ಮಾಹಿತಿ ನೀಡಿ

54

Get real time updates directly on you device, subscribe now.


ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರು, ವಿಚಾರಣೆ, ಮತ್ತಿತರ ಮಾಹಿತಿಗಾಗಿ ಸಂಪರ್ಕಿಸಲು ಅನುವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ 0816-1950ರ ಕಾರ್ಯಾವಧಿಯನ್ನು ವಿಸ್ತರಿಸಬೇಕೆಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 8 ರಿಂದ ರಾತ್ರಿ 8ರ ವರೆಗೆ ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆಯ ಕಾರ್ಯಾವಧಿಯನ್ನು ಗುರುವಾರದಿಂದ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ವಿಸ್ತರಿಸಬೇಕೆಂದು ಸೂಚನೆ ನೀಡಿದರು.
ಸಹಾಯವಾಣಿ 1950 ಸಂಖ್ಯೆಗೆ ಚುನಾವಣಾ ಮಾಹಿತಿ ಕೋರಿ ಯಾರೇ ಕರೆ ಮಾಡಿದರೂ ನಿಯೋಜಿತ ಅಧಿಕಾರಿ, ಸಿಬ್ಬಂದಿ ಅಗತ್ಯ ಮಾಹಿತಿ ನೀಡಬೇಕು, ದೂರು ಕರೆಗಳು ಸ್ವೀಕೃತವಾದಾಗ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ನಿರ್ದೇಶನ ನೀಡಿದರು.

ಕಳೆದ 6 ತಿಂಗಳಲ್ಲಿ ಸಹಾಯವಾಣಿ ಸಂಖ್ಯೆಗೆ ಸ್ವೀಕೃತವಾದ ಕರೆ, ದೂರುಗಳ ಬಗ್ಗೆ ಮಾಹಿತಿ ನನ್ನ ಗಮನಕ್ಕೆ ತರಬೇಕೆಂದು ಸೂಚಿಸಿದಾಗ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಉತ್ತರಿಸುತ್ತಾ ಅಕ್ಟೋಬರ್ 28 ರಿಂದ ಡಿಸೆಂಬರ್ 19ರ ವರೆಗೆ ವಿಚಾರಣೆ ಕೋರಿ 386 ಹಾಗೂ ದೂರಿಗೆ ಸಂಬಂಧಿಸಿದ 4 ಕರೆ ಸೇರಿದಂತೆ ಒಟ್ಟು 390 ಕರೆ ಸ್ವೀಕೃತವಾಗಿವೆ, ದೂರಿಗೆ ಸಂಬಂಧಿಸಿದ 4 ಕರೆಗಳಿಗೂ ಸ್ಪಂದಿಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ವೀಕ್ಷಕರ ಗಮನಕ್ಕೆ ತಂದರು.
ವಿದೇಶದಲ್ಲಿ ವಾಸವಿರುವ ಜಿಲ್ಲೆಯ ಮತದಾರರ ಬಗ್ಗೆ ಸಭೆಯಲ್ಲಿ ಚಿರ್ಚಿಸಿದಾಗ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮಾತನಾಡಿ, ವಿದೇಶದಲ್ಲಿ ವಾಸವಿರುವ ಮತದಾರರ ಪೈಕಿ ಈವರೆಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ 2 ಅರ್ಜಿ ಸ್ವೀಕೃತಿಯಾಗಿವೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಮಣಿವಣ್ಣನ್ ವಿದೇಶದಲ್ಲಿ ವಾಸವಿರುವವರು ಮತದಾನ ಮಾಡಲು ನಮೂನೆ-6ಎ ಮೂಲಕ ಅರ್ಜಿ ಸಲ್ಲಿಸಬೇಕು, ಈ ಕುರಿತು ಜಿಲ್ಲಾಡಳಿತದಿಂದ ಸೂಕ್ತ ಪ್ರಚಾರ ನೀಡಬೇಕು, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅನುವಾಗುವಂತೆ ನಗರ ಪ್ರದೇಶ ವ್ಯಾಪ್ತಿಯ ಎಲ್ಲಾ ಮನೆಗಳ ಮೇಲೆ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಓ) ಗಳ ಮೊಬೈಲ್ ಸಂಖ್ಯೆಯ ಸ್ಟಿಕ್ಕರ್ ಅಂಟಿಸಬೇಕೆಂದು ಸೂಚನೆ ನೀಡಿದರು.

ನಿಷ್ಪಕ್ಷಪಾತ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕಣಾ ಕಾರ್ಯವನ್ನು ಪಾರದರ್ಶಕವಾಗಿ ನಡೆಸಬೇಕು, ಮತದಾರರ ಪಟ್ಟಿ ಪರಿಷ್ಕರಣೆಯು ಚುನಾವಣೆಯ ಪ್ರಮುಖ ಘಟ್ಟ, ಈ ಕಾರ್ಯದಲ್ಲಿ ಲೋಪ ಎಸಗುವ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮತದಾನ ದಿನವನ್ನು ಮಾತ್ರ ಚುನಾವಣಾ ಕರ್ತವ್ಯವೆಂದು ಭಾವಿಸದೆ ಚುನಾವಣಾ ಕರ್ತವ್ಯ ಈಗಾಗಲೇ ಪ್ರಾರಂಭವಾಗಿದೆ ಎಂದು ಭಾವಿಸಿ ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಬೇಕು, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ತಾಲ್ಲೂಕುಗಳಲ್ಲಿ ಇಂದಿನಿಂದಲೇ ಸಹಾಯವಾಣಿ ಸ್ಥಾಪಿಸಬೇಕು, ದೂರು, ವಿಚಾರಣೆಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಕರೆಗಳ ವಿವರ ದಾಖಲಿಸಲು ಪ್ರತ್ಯೇಕ ವಹಿ ನಿರ್ವಹಣೆ ಮಾಡಿ, ಪ್ರತಿ ದಿನ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಬೇಕೆಂದು ನಿರ್ದೇಶಿಸಿದರು.
ನಿಗದಿತ ಅವಧಿಯೊಳಗೆ ನಿಗದಿತ ನಮೂನೆಯಲ್ಲಿ ಸಲ್ಲಿಕೆಯಾದ 35751 ಅರ್ಹ ಮತದಾರರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಜಿಲ್ಲೆಯಲ್ಲಿ ಶೇ.100 ರಷ್ಟು ಚುನಾವಣಾ ಗುರುತಿನ ಚೀಟಿ ವಿತರಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಮತದಾರರ ಅನುಕೂಲಕ್ಕಾಗಿ ಪಾಲಿಕೆ ಹಾಗೂ ಜಿಲ್ಲಾಡಳಿತದ ಜಾಲತಾಣದಲ್ಲಿಯೂ ಬಿ ಎಲ್ ಓಗಳ ಮೊಬೈಲ್ ಸಂಖ್ಯೆ ಹಾಗೂ ಸಹಾಯವಾಣಿ ಸಂಖ್ಯೆಯನ್ನು ಅಪ್ ಲೋಡ್ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮಹಾ ನಗರಪಾಲಿಕೆ ಆಯುಕ್ತೆ ಅಶ್ವಿಜ, ಎಲ್ಲಾ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!