ಶಿರಾ: ವೈಕುಂಠ ಏಕಾದಶಿ ಅಂಗವಾಗಿ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ವೈಕುಂಠ ನಾರಾಯಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಶಿರಾ ನಗರ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿರುವ 8ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಬೆಳಗ್ಗೆ 7 ಗಂಟೆಗೆ ಮಹಾ ಮಂಗಳಾರತಿ ಹಾಗೂ ವೈಕುಂಠ ದ್ವಾರದ ಮೂಲಕ ವೈಕುಂಠ ನಾರಾಯಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು, ಸಂಜೆ 6 ಗೆ ಶ್ರೀ ಶಾರದಾ ಮಹಿಳಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಸತ್ಯನಾರಾಯಣ ಶರ್ಮ ತಿಳಿಸಿದ್ದಾರೆ.
ನಗರದ ಶ್ರೀ ಬಾಲಾಜಿ ದೇವಸ್ಥಾನದಲ್ಲಿ ಶ್ರೀ ಬಾಲಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ವೈಕುಂಠ ಏಕಾದಶಿ ಹಾಗೂ 24 ರ ಭಾನುವಾರ ವೈಕುಂಠ ದ್ವಾದಶಿ ಪ್ರಯುಕ್ತ ಪೂಜಾ ಕಾರ್ಯ ಹಮ್ಮಿಕೊಳ್ಳಲಾಗಿದೆ, ಶನಿವಾರ ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ, 5.30ಕ್ಕೆ ಮೂಲ ವಿಗ್ರಹಕ್ಕೆ ಅಭಿಷೇಕ, 8 ಗಂಟೆಗೆ ಗರುಡ ಸಮೇತ ಸ್ವಾಮಿಗೆ ಪ್ರಾಕಾರೋತ್ಸವ, 8.30 ಕ್ಕೆ ಅಷ್ಟಾವಧಾನ ಸೇವೆ, ಮಂಗಳಾರತಿ ನಂತರ ವೈಕಂಠ ದ್ವಾರದಲ್ಲಿ ಪ್ರವೇಶ ಮಾಡಿ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಮಂಡಳಿಯ ಸದಸ್ಯ ಬಲಶಾಮ್ ಸಿಂಗ್ ತಿಳಿಸಿದ್ದಾರೆ.
ಶಿರಾದ ಕರೆಕಲ್ಲ ಹಟ್ಟಿಯಲ್ಲಿರುವ ಶ್ರೀ ಮೂಡಲಗಿರಿ ತಿಮ್ಮಪ್ಪ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ಹರಳುಗಳಿಂದ ವಿಶೇಷ ಅಲಂಕಾರ ಹಾಗೂ ಪೂಜೆ ಸಲ್ಲಿಸಲಾಗುವುದು ಎಂದು ದೇವಸ್ಥಾನದ ಕಮಿಟಿ ಸದಸ್ಯರು ತಿಳಿಸಿದ್ದಾರೆ. ನಗರದ ಪಾಂಡುರಂಗ ಸ್ವಾಮಿ ದೇವಾಲಯ ಹಾಗೂ ಗಣಪತಿ ದೇವಸ್ಥಾನಗಳಲ್ಲೂ ಭಕ್ತರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವೈಕುಂಠ ದ್ವಾರ ಪ್ರವೇಶ ಕಲ್ಪಿಸಲಾಗಿದೆ.
ಸಾವಿರಾರು ವರ್ಷದ ಹಿನ್ನೆಲೆ ಉಳ್ಳ ಶಿರಾ ತಾಲೂಕು ಮೇಲುಕುಂಟೆ ಗ್ರಾಮದ ನವನೀತ ಶ್ರೀ ಬಾಲಕೃಷ್ಣ ಸ್ವಾಮಿ ದೇವಾಲಯದಲ್ಲಿಯೂ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗ್ಗೆ 7ಗೆ ಮಹಾ ಮಂಗಳಾರತಿ ನಂತರ ವೈಕುಂಠ ದ್ವಾರ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರಧಾನ ಅರ್ಚಕ ಚಕ್ರಪಾಣಿ ತಿಳಿಸಿದ್ದಾರೆ, ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮರಡಿಗುಡ್ಡದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಮಹಾ ಮಂಗಳಾರತಿ ನಂತರ ವೈಕುಂಠ ದ್ವಾರ ಪ್ರವೇಶ ಕಲ್ಪಿಸಲಾಗಿದೆ ಎಂದು ಧರ್ಮದರ್ಶಿ ಕಾಂತರಾಜ್ ತಿಳಿಸಿದ್ದಾರೆ.
Comments are closed.