ಕೋಡಿ ಸೇತುವೆ ಅಗಲೀಕರಣಕ್ಕೆ ತಿಂಗಳ ಗಡುವು

37

Get real time updates directly on you device, subscribe now.


ತುಮಕೂರು: ನಗರದ ಶಿರಾ ಗೇಟ್ ನ ಅಮಾನಿಕೆರೆ ಕೋಡಿ ಸೇತುವೆಯನ್ನು ಒಂದು ತಿಂಗಳಲ್ಲಿ ಅಗಲ ಮಾಡಿ ಇಲ್ಲಿನ ರಸ್ತೆ ವಿಸ್ತರಣೆ ಮಾಡದಿದ್ದರೆ ಸಂಘಟನೆಗಳು ಹಾಗೂ ನಾಗರಿಕರ ಜೊತೆ ತಾವು ಸ್ಥಳದಲ್ಲಿ ಧರಣಿ ನಡೆಸುವುದಾಗಿ ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧಿಶ್ವರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಎಸ್ ಮಾಲ್ ಎದುರಿನ ಕಿರಿದಾದ ರಸ್ತೆಯ ಈ ಕೋಡಿ ಸೇತುವೆಯಿಂದ ನಿತ್ಯ ಆಗುತ್ತಿರುವ ಸಂಚಾರ ಸಮಸ್ಯೆ ಬಗ್ಗೆ ನಗರಾಡಳಿತದ ಗಮನ ಸೆಳೆಯಲು ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರ ಮನವಿ ಮೇರೆಗೆ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಮೇಯರ್ ಪ್ರಭಾವತಿ, ಇದೊಂದು ಅಪಾಯಕಾರಿ ಸ್ಥಳವಾಗಿದೆ, ವಾಹನ ಸವಾರರು ಈ ಜಾಗದಲ್ಲಿ ಸಾಗಿ ಹೋಗಲು ನರಕ ಯಾತನೆ ಅನುಭವಿಸುತ್ತಿದ್ದಾರೆ, ತುರ್ತಾಗಿ ಕೋಡಿ ಸೇತುವೆ ಅಗಲಗೊಳಿಸಿ ಸುಗಮ ಸಂಚಾರಕ್ಕೆ ರಸ್ತೆ ಸಿದ್ಧ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸೇತುವೆ ಹಾಗೂ ರಸ್ತೆ ವಿಸ್ತರಣೆಗೆ ನಗರ ಪಾಲಿಕೆಯಿಂದ ಒಂದೂವರೆ ಕೋಟಿ ರೂ. ಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಲಾಗಿದೆ, ಬಾಕಿ ಹಣ ಹೊಂದಿಸಿ ಜಿಲ್ಲಾಡಳಿತ ಈ ಕಾಮಗಾರಿ ತುರ್ತಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ತಾವು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ಮೇಯರ್, ಒಂದು ತಿಂಗಳಲ್ಲಿ ಸೇತುವೆ ಅಗಲೀಕರಣ ಕಾಮಗಾರಿ ಆರಂಭಿಸಬೇಕು, ಇಲ್ಲವಾದರೆ ತಾವು ಸಂಘಟನೆಗಳು ಹಾಗು ನಾಗರಿಕರ ಜೊತೆ ಸೇರಿ ಕೋಡಿ ಸ್ಥಳದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಶಿರಾ ಗೇಟ್ ರಸ್ತೆಯಲ್ಲಿ ದಿನೇ ದಿನೆ ಸಂಚಾರ ಸಾಂದ್ರತೆ ಹೆಚ್ಚಾಗುತ್ತಿದೆ, ರಾಜ್ಯದ ಮುಕ್ಕಾಲು ಭಾಗದ ಜಿಲ್ಲೆಗಳಿಗೆ ಬಸ್ ಗಳು, ಸರಕು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ, ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೈಗಾರಿಕಾ ಪ್ರದೇಶ, ಮಾರುಕಟ್ಟೆಗೆ ಹೋಗಿ ಬರುವವರು, ಎಸ್ ಮಾಲ್ ಗೆ ಬರುವವರು ಇದೇ ರಸ್ತೆ ಅವಲಂಬಿಸಬೇಕಾಗಿದೆ, ಹೀಗಾಗಿ ಇಲ್ಲಿ ಸಂಚಾರ ಒತ್ತಡ ಹೆಚ್ಚಾಗಿ ವಯೋವೃದ್ಧರು, ಶಾಲಾ ಮಕ್ಕಳು, ದ್ವಿಚಕ್ರ ವಾಹನ ಚಾಲಕರು ಸಂಚಾರ ಮಾಡಲು ಆತಂಕ ಪಡುವಂತಾಗಿದೆ, ಇತ್ತೀಚೆಗೆ ಇದೇ ಸೇತುವೆ ಮೇಲೆ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟರು, ಪ್ರತಿನಿತ್ಯ ಒಂದಲ್ಲೊಂದು ರೂಪದಲ್ಲಿ ಅಪಘಾತ ನಡೆಯುತ್ತಲೇ ಇವೆ ಎಂದು ಮೇಯರ್ ಗಮನಕ್ಕೆ ತಂದರು.

ನ್ಯಾಯಾಧೀಶರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸಿಇಓ, ಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳೂ ನಿತ್ಯ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ, ಅವರಿಗೂ ಈ ಸಮಸ್ಯೆ ಬಗ್ಗೆ ಅರಿವಿಗೆ ಬಂದಿದೆ, ಆದರೂ ಇದುವರೆಗೂ ಯಾರೂ ಸೇತುವೆ ಅಗಲೀಕರಣಕ್ಕೆ ಮನಸ್ಸು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿ ಜರೂರಾಗಿ ಇಲ್ಲಿನ ಸೇತುವೆ, ರಸ್ತೆ ಅಗಲಗೊಳಿಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಕಾಮಗಾರಿ ಮುಗಿಯುವ ವರೆಗೂ ತಕ್ಷಣಕ್ಕೆ ಸೇತುವೆ ಭಾಗದಲ್ಲಿ ರಸ್ತೆ ಉಬ್ಬು ನಿರ್ಮಿಸಿ ಸಂಚಾರ ನಿಯಂತ್ರಿಸಬೇಕು, ರಸ್ತೆ ಕಿರಿದಾಗಿದೆ ಎಂಬ ಎಚ್ಚರಿಕೆಯ ಸೂಚನಾ ಫಲಕ, ಬೀದಿ ದೀಪ ಅಳವಡಿಸಬೇಕು, ದಿನವಿಡೀ ಸಂಚಾರಿ ಪೊಲಿಸರನ್ನು ಇಲ್ಲಿಗೆ ನಿಯೋಜಿಸಬೇಕು, ಅಲ್ಲದೆ ಇಲ್ಲಿ ಪೊಲೀಸರು ವಾಹನಗಳನ್ನು ತಡೆದು ಸಂಚಾರಿ ನಿಯಮ ಉಲ್ಲಂಘನೆಯ ದಂಡ ವಸೂಲಿ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ ಧನಿಯಾಕುಮಾರ್, ಈ ತಿಂಗಳ 26 ರಂದು ಇಲ್ಲಿ ಒಕ್ಕೂಟದಿಂದ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಅಧಿಕಾರಿಗಳ ನಿರ್ಧಾರ ನೋಡಿಕೊಂಡು ತೀರ್ಮಾನ ಮಾಡುವುದಾಗಿ ಹೇಳಿದರು.

2ನೇ ವಾರ್ಡ್ ನಗರ ಪಾಲಿಕೆ ಸದಸ್ಯ ಮಂಜುನಾಥ್, ಕನ್ನಡಪರ ಸಂಘಟನೆಗಳ ಮುಖಂಡರಾದ ಶಂಕರ್, ಸೋಮಶೇಖರ್, ಕನ್ನಡ ಪ್ರಕಾಶ್, ರಂಜನ್, ಅರುಣ್ ಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ವೇಂಕಟೇಶಾಚಾರ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!