ಮಾನವ ಕಳ್ಳ ಸಾಗಾಣೆ ನಿರ್ಮೂಲನೆ ಅಗತ್ಯ

ಮಕ್ಕಳ ಬದುಕು, ಭವಿಷ್ಯ ರೂಪಿಸುವುದು ಎಲ್ಲರ ಹೊಣೆ: ಸಿಇಓ ಪ್ರಭು

52

Get real time updates directly on you device, subscribe now.


ತುಮಕೂರು: ಮಾನವೀಯ ಸಮಾಜ, ದೇಶದ ಅಭಿವೃದ್ಧಿಗೆ ಮುಳ್ಳಾಗಿರುವ ಮಾನವ ಕಳ್ಳ ಸಾಗಾಣಿಕೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು, ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮನವಿ ಮಾಡಿದರು.
ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮೈಸೂರಿನ ಒಡನಾಡಿ ಸೇವಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ತಿಪಟೂರಿನ ಬದುಕು ಸಂಸ್ಥೆ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆಯ ಹೊಸ ಆಯಾಮಗಳು ಎಂಬ ವಿಚಾರವಾಗಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 14 ವರ್ಷದೊಳಗಿನ ಸುಮಾರು 36 ಕೋಟಿ ಮಕ್ಕಳು ನಮ್ಮ ದೇಶದಲ್ಲಿದ್ದಾರೆ, ಅವರ ಬದುಕು, ಭವಿಷ್ಯ ರೂಪಿಸಲು ಎಲ್ಲರೂ ಕಾಳಜಿ ವಹಿಸಬೇಕು, ಮಕ್ಕಳು ಹುಟ್ಟಿದಾಗಿನಿಂದ ಕೊನೆಯ ವರೆಗೆ ಅವರು ಜವಾಬ್ದಾರಿಯುವ ಪ್ರಜೆಗಳನ್ನಾಗಿ ರೂಪಿಸಿಲು ವಿವಿಧ ಹಂತದಲ್ಲಿ ಅವರ ಬದುಕಿನಲ್ಲಿ ಬರುವ ಪ್ರತಿಯೊಬ್ಬರೂ ಹೊಣೆಗಾರ ರಾಗಿರುತ್ತಾರೆ, ಅವರು ತಮ್ಮ ಜವಾಬ್ದಾರಿ ಕಡೆಗಣಿಸಿದರೆ ಮಕ್ಕಳ ಭವಿಷ್ಯದ ಜೊತೆಗೆ ದೇಶದ ಅಭಿವೃದ್ಧಿ ಹಾಗೂ ಭವಿಷ್ಯಕ್ಕೂ ಮಾರಕವಾಗುತ್ತದೆ ಎಂದರು.

ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ನಂತರ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಬೇಕು, ಮುಂದೆ ಅವರು ಸರಿದಾರಿಯಲ್ಲಿ ಸಾಗಲು ಸಮಾಜವೂ ನಿರ್ಣಾಯಕವಾಗಿ ನೆರವಾಗಬೇಕು, ಆ ಮೂಲಕ ಅವರು ದೇಶದ ಜವಾಬ್ದಾರಿಯುವ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಕೊಡುಗೆಯಾಗಬೇಕು, ಮಕ್ಕಳು ದಾರಿ ತಪ್ಪದಂತೆ ಅವರು ಮೋಸ ಹೋಗದಂತೆ ಎಚ್ಚರ ವಹಿಸಿ ಕಾಪಾಡುವ ಪ್ರಯತ್ನ ಎಲ್ಲಾ ಹಂತಗಳ್ಲೂ ಆಗಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಮಾನವ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮಾನವ ಕಳ್ಳ ಸಾಗಾಣಿಕೆ ಡ್ರಗ್ಸ್ಗಿಂತಲೂ ಅಪಾಯಕಾರಿ, ಮಕ್ಕಳು ಹಾಗೂ ಮಹಿಳೆಯರು ಒಂದಲ್ಲೊಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ, ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ ದುಷ್ಟಕೂಟಗಳ ಬಗ್ಗೆ ಜನ ಜಾಗೃತರಾಗಿರಬೇಕು, ಅಂತಹ ಕೂಟಗಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು ಸಹಕರಿಸಬೇಕು, ಮಾನವ ಸಂಪನ್ಮೂಲ ಯಾವ ಕಡೆ ಸಾಗುತ್ತಿದೆ ಎಂಬ ಎಚ್ಚರಿಕೆ ಎಲ್ಲರಲ್ಲೂ ಇರಬೇಕು, ತಪ್ಪುಗಳನ್ನು ಸರಿಪಡಿಸಿ ಸರಿದಾರಿಗೆ ತರುವ ಪ್ರಯತ್ನದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಹೆಣ್ಣು ಮಕ್ಕಳನ್ನು ಮಾರಾಟ ಮಾಡಿ ವೈಶ್ಯಾವಾಟಿಕೆಗೆ ತೊಡಗಿಸುವುದು, ದೂರದ ನಗರಗಳಲ್ಲಿ ಹಾಗೂ ಎಸ್ಟೇಟ್ ಗಳಲ್ಲಿ ಸಮಾಜದ ಕಣ್ಣಿಗೆ ಕಾಣದಂತೆ ದುಡಿಸಿಕೊಳ್ಳುವ ಜೀತ ಪದ್ದತಿ ಈಗಲೂ ಜೀವಂತವಾಗಿದೆ, ಇಂತಹ ಅನಿಷ್ಟ ಕೃತ್ಯಗಳಿಗೆ ಕಡಿವಾಣ ಬೀಳಬೇಕು, ಮಕ್ಕಳು ದುಷ್ಟರ ಕೈಗೆ ಸಿಕ್ಕಿ ಮನೆ ಬಿಟ್ಟು ಹೋಗಲು ಕುಟುಂಬದ ವಾತಾವರಣವೂ ಕಾರಣವಾಗಿರಬಹುದು, ಪೋಷಕರು ಮಕ್ಕಳಿಗೆ ಸೌಕರ್ಯ ಕೊಡುವುದರ ಜೊತೆಗೆ ಸಮಯ ಕೊಟ್ಟು, ಸರಿದಾರಿಯಲ್ಲಿ ನಡೆಯಲು ತಿಳುವಳಿಕೆ ನೀಡಬೇಕು, ಮಕ್ಕಳಲ್ಲಿ ಬದುಕಿನ ಭವಿಷ್ಯದ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಹಣ ಸಂಪಾದನೆ ಹಾಗೂ ಲೈಂಗಿಕ ಬಳಕೆಗಾಗಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದು ದಂಧೆಯಾಗಿ ಕಂಡು ಬಂದಿದೆ, ಅಂತಹ ಜಾಲವನ್ನು ಬುಡಮಟ್ಟದಿಂದಲೇ ಮಟ್ಟ ಹಾಕಬೇಕು, ಮಾನವ ಕಳ್ಳ ಸಾಗಾಣಿಕೆ, ಮಕ್ಕಳ ಶೋಷಣೆ ಪ್ರಕರಣ ಗಮನಕ್ಕೆ ಬಂದರೆ ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೆ ಆರಂಭದಲ್ಲೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಒಡನಾಡಿ ಸಂಸ್ಥೆಯ ಕೆ.ವಿ.ಸ್ಟಾನ್ಲಿ ಮಾತನಾಡಿ, ದೇಶ, ಸಮಾಜ ಉಳಿದು ಬೆಳೆಯಲು ನಮ್ಮ ಕುಡಿಗಳು ಉಳಿಯಬೇಕು, ಹೆಣ್ಣು ಮಕ್ಕಳನ್ನು ಕುರಿ, ಕೋಳಿ, ತರಕಾರಿಯಂತೆ ಮಾರಾಟ ಮಾಡುವುದು, ಅನೈತಿಕ, ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸುವುದು ಅಮಾನವೀಯ, ಅಕ್ಷಮ್ಯ ಅಪರಾಧ, ಇದನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರ ಇಲಾಖೆ, ಸಮಾಜ ಆದ್ಯತೆ ನೀಡಬೇಕು ಎಂದು ಆಶಿಸಿದರು.
ಕಾಲ ಬದಲಾದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ, ತಕ್ಕನಾದ ಕಾನೂನು ಬದಲಾವಣೆ ಹಾಗೂ ಅಪರಾಧಿಗಳ ಪತ್ತೆಗೆ ಇಲಾಖೆಗಳು ತಂತ್ರಜ್ಞಾನದ ತಿಳುವಳಿಕೆ ಬೆಳೆಸಿಕೊಂಡು ಇಂತಹ ಅಪರಾಧ ಕೃತ್ಯ ತಡೆಯಬೇಕು, ಅಪ್ರಾಪ್ತ ಮಕ್ಕಳನ್ನು ಕಾಪಾಡುವ ವಿಚಾರದಲ್ಲಿ ಜಾತಿ, ಧರ್ಮ, ಆರೋಪಿಯ ಸ್ಥಾನ ಮಾನಕ್ಕಿಂಥಾ ಸಂವಿಧಾನವೇ ಪೂಜ್ಯ ಎಂದು ಭಾವಿಸಿ ಎಲ್ಲರಿಗೂ ಒಂದೇ ರೀತಿಯ ಕಾನೂನು ಬಳಕೆ ಮಾಡಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎಸ್.ಶ್ರೀಧರ್, ಒಡನಾಡಿ ಸಂಸ್ಥೆ ಅಧ್ಯಕ್ಷ ಪರಶುರಾಮ್, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ನಂದಕುಮಾರ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!