ಸಂತೆಯಲ್ಲಿ ತರಕಾರಿ ಖರೀದಿಸಿದ ಪಾಲಿಕೆ ಆಯುಕ್ತೆ ಅಶ್ವಿಜ

ತುಮಕೂರಿನ ಬಿ.ಎ.ಗುಡಿಪಾಳ್ಯ ಶಾಲೆಯಲ್ಲಿ ಮಕ್ಕಳ ಸಂತೆ ಸಡಗರ

32

Get real time updates directly on you device, subscribe now.


ತುಮಕೂರು: ಹಿಂದೆ ಸಂತೆಗಳು ಅಂದ್ರೆ ಗ್ರಾಮೀಣರ ಜೀವನದ ಭಾಗವಾಗಿದ್ದವು, ಎಲ್ಲಾ ರೀತಿಯ ವಸ್ತುಗಳನ್ನು ಕೊಳ್ಳುವುದು, ಮಾರುವುದು ಸಂತೆಯ ವಿಶೇಷ, ವಾರಕ್ಕೊಂದು ಸಂತೆ ಬಂತೆಂದರೆ ಅಲ್ಲಿ ಎಲ್ಲಾ ವಸ್ತು ಸಿಗಲಿವೆ, ಸಂತೆಗೆ ಹೋಗಿ ಬರೋದೆ ಒಂದು ಸುಂದರ ಅನುಭವದಂತಿತ್ತು, ಆದರೆ ಇಂದು ಸಂತೆಗಳು ಅಲ್ಲೊಂದು ಇಲ್ಲೊಂದು ಕಾಣ ಬಹುದಾಗಿದೆ, ಮಾಲ್, ಬಿಗ್ ಮಾರ್ಕೆಟ್ ಗಳ ಹಾವಳಿಯಿಂದ ಇಂದು ಸಂತೆಗಳು ಕಳೆಗುಂದಿವೆ.

ಪಟ್ಟಣ, ನಗರಗಳಲ್ಲಿ ದೊಡ್ಡ ದೊಡ್ಡ ಮಾರ್ಕೆಟ್ ಗಳು ತಲೆ ಎತ್ತಿ ಸಂತೆ, ಸಣ್ಣ ಮಾರುಕಟ್ಟೆಗಳಿಗೆ ಹೊಡೆತ ನೀಡಿವೆ, ಸಂತೆ ಅಂದ್ರೆ ನಗರದ ಎಷ್ಟೋ ಮಕ್ಕಳಿಗೆ ತಿಳಿದೇ ಇಲ್ಲ, ಸಂತೆಯ ಮಹತ್ವ ಸಾರುವ ನಿಟ್ಟಿನಲ್ಲಿ ತುಮಕೂರಿನ ಬಿ.ಎ.ಗುಡಿಪಾಳ್ಯ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಮೇಳ ಏರ್ಪಡಿಸಲಾಗಿತ್ತು, ಈ ಸಂತೆ ಮೇಳದಲ್ಲಿ ವಿದ್ಯಾರ್ಥಿಗಳು ಹಣ್ಣು, ತರಕಾರಿ, ಹೂವು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ತಮ್ಮ ವ್ಯಾಪಾರ ಕೌಶಲ್ಯ ಪ್ರದರ್ಶಿಸಿ ಸಡಗರಪಟ್ಟರು.
ಶುಕ್ರವಾರ ನಡೆದ ಮಕ್ಕಳ ಸಂತೆಯಲ್ಲಿ ತುಮಕೂರು ಮಹಾ ನಗರ ಪಾಲಿಕೆ ಆಯುಕ್ತರಾದ ಅಶ್ವಿಜ ಅವರು ಮಕ್ಕಳಿಂದ ಸ್ವತಃ ತರಕಾರಿ ಖರೀದಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರಿಕ ಪ್ರಜ್ಞೆ ಬೆಳೆಸಲು ಹಾಗೂ ಗಣಿತ ಜ್ಞಾನ ಹೆಚ್ಚಿಸಲು ಇಲಾಖೆಯಿಂದ ಪಠ್ಯೇತರ ಚಟುವಟಿಕೆಯಾಗಿ ಶಾಲೆಗಳಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗುತ್ತದೆ, ಮಕ್ಕಳು ಇಂತಹ ಚಟುವಟಿಕೆಗಳ ಮೂಲಕ ಪರಸ್ಪರ ಬೆರೆಯುವ, ಸಂಭ್ರಮಿಸುವ ಜೊತೆಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳಿಗೆ ಓದು ಮುಖ್ಯ, ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ತಮ್ಮಗುರಿ ಸಾಧಿಸಲು ಗಮನ ನೀಡಬೇಕು, ಶಿಕ್ಷಕರು, ಪೋಷಕರು ನೀಡುವ ಮಾರ್ಗದರ್ಶನ ಅನುಸರಿಸಿ ಆದರ್ಶ ಗುಣ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ನಗರ ಪಾಲಿಕೆ ಉಪ ಮೇಯರ್ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ಶಾಲಾ ಸಂತೆಯಿಂದ ಕುಟುಂಬದ ದೈನಂದಿನ ವ್ಯಾಪಾರ, ವ್ಯವಹಾರದ ಬಗ್ಗೆ ಮಕ್ಕಳು ಅರಿವು ಬೆಳೆಸಿಕೊಳ್ಳಲು ಅವಕಾಶವಿದೆ, ವ್ಯಾವಹಾರಿಕ ಜ್ಞಾನದಿಂದ ಮುಂದೆ ಶಿಸ್ತುಬದ್ಧ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ, 20ನೇ ವಾರ್ಡ್ ಸದಸ್ಯ ಎ.ಶ್ರೀನಿವಾಸ್ ಮಾತನಾಡಿ, ಬಿ.ಎ.ಗುಡಿ ಪಾಳ್ಯ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದ್ದು, ಮಕ್ಕಳು ಭವಿಷ್ಯ ರೂಪಿಸಿಕೊಳ್ಳಲು ಶಾಲೆ ಮುನಾದಿಯಗಿದೆ, ಶಾಲೆಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗುವುದು, ಸರ್ಕಾರಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಪೋಷಕರಿಗೆ ಮನವಿ ಮಾಡಿದರು.
ಎಸ್ಡಿಎಂಸಿ ಅಧ್ಯಕ್ಷೆ ಶೋಭಾ, ಮುಖ್ಯ ಶಿಕ್ಷಕಿ ಸೌಭಾಗ್ಯಮ್ಮ ಸೇರಿದಂತೆ ಎಸ್ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು ಹಾಜರಿದ್ದು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳಲ್ಲಿ ಉತ್ಸಾಹ ಮೂಡಿಸಿದರು.

Get real time updates directly on you device, subscribe now.

Comments are closed.

error: Content is protected !!