ಶಿರಾ: ವ್ಯವಹಾರ ಸರಿಯಾಗಿ ಮಾಡಿದಲ್ಲಿ ಲಾಭಾಂಶ ಬಂದೇ ಬರುತ್ತದೆ, ನಿಮ್ಮ ಲಾಭಾಂಶವನ್ನು ನಿಮಗೆ ಹಂಚಿಕೆ ಮಾಡುವಲ್ಲಿ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನುಡಿದರು.
ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರಗತಿ ಸಮಾವೇಶ ಮತ್ತು ಸ್ವ ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಲಾಭಾಂಶ ಎಂದರೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ, ಬೆಣ್ಣೆ ತೆಗೆದ ನಂತರವೂ ಮಜ್ಜಿಗೆ ಕಡಿಮೆ ಆಗುವುದಿಲ್ಲ, ಹಾಗೆ ನಿಮ್ಮ ಉಳಿತಾಯದ ಲಾಭಾಂಶವೂ ಸಹಾ ನಿಮ್ಮದೆ, ನಾನು ಶಿರಾಕ್ಕೆ ಬರುವ ಮುನ್ನ ಇಲ್ಲಿ ಮದ್ಯವರ್ಜನ ಶಿಬಿರ ನಡೆಸಲಾಗುತ್ತಿದೆ, ಮದ್ಯ ವರ್ಜನ ಎಂದರೆ ದುಡಿಮೆಯ ಉಳಿತಾಯ, ಬರಿ ಉಳಿತಾಯ ಮಾತ್ರವಲ್ಲ, ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ, ಕುಡಿತ ಬಿಡುಸುತ್ತೇವೆ ಎಂದಾಕ್ಷಣ ನಾವು ಮದ್ಯ ಮಾರಾಟಗಾರರ ವಿರುದ್ಧ ಅಲ್ಲ, ಆದರೆ ಮನೆಯ ಮಹಿಳೆಯ ಪರ ಎಂದು ಸಮರ್ಥಿಸಿಕೊಂಡರು, ನಿಮ್ಮ ಎಲ್ಲಾ ಬಗೆಯ ಅಭಿವೃದ್ಧಿಗೆ ಕಾರಣವಾಗುವ ಸೇವಾ ಪ್ರತಿನಿಧಿಯನ್ನು ಗೌರವಿಸಿ, ನಿಮ್ಮ ನಿಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿ, ಒಳ್ಳೆಯ ಶಿಕ್ಷಣ ಕೊಡಿಸಿ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಧಾರ್ಮಿಕ ಕ್ಷೇತ್ರದ ಗುರುವಾಗಿ, ಸಾಮಾಜಿಕ ಕಳಕಳಿ ಇಟ್ಟುಕೊಂಡಿರುವುದನ್ನು ಡಾ.ವೀರೇಂದ್ರ ಹೆಗ್ಗಡೆಯವರಲ್ಲಿ ಮಾತ್ರ ಕಾಣಬಹುದು, ಮಹಿಳಾ ಸಬಲೀಕರಣ, ಕುಡಿಯುವ ನೀರು, ಕೆರೆಗಳ ಅಭಿವೃದ್ಧಿ, ದೇವಸ್ಥಾನಗಳ ಜೀರ್ಣೋದ್ಧಾರ ಮೊದಲಾದ ಸಾಮಾಜಿಕ ಕಾರ್ಯಗಳ ಮೂಲಕ ಅವರು ಎಲ್ಲರಿಗೆ ಮಾದರಿಯಾಗಿದ್ದಾರೆ, ಇವರಿಂದ ಮಾರ್ಗದರ್ಶನ ಪಡೆಯಲೆಂದೇ ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಅವರನ್ನು ಕರೆಸಿಕೊಂಡಿದೆ, ಶಿರಾ ನಗರದಲ್ಲಿ ಅವರ ಸಂಸ್ಥೆಗೆ ಎರಡು ಎಕರೆ ಜಮೀನು ನೀಡಲು ಸಂಕಲ್ಪಿಸಿದ್ದು, ಅಲ್ಲಿ ರುಡ್ ಸೆಟ್ ಕೇಂದ್ರವನ್ನು ತೆರೆಯುವಂತೆ ಶಾಸಕ ಟಿ.ಬಿ.ಜಯಚಂದ್ರ ಮನವಿ ಮಾಡಿದರು.
ನಮ್ಮೂರು- ನಮ್ಮ ಕೆರೆ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಿದ ತಾಲ್ಲೂಕಿನ ಗೌಡಗೆರೆ ಹೋಬಳಿ, ಹೊನ್ನೇನಹಳ್ಳಿ ಕೆರೆಯನ್ನು ಹಸ್ತಾಂತಾರ ಮಾಡಿದ ವಿಧಾನ ಪರಿಷತ್ ಶಾಸಕ ಚಿದಾನಂದ ಎಂ.ಗೌಡ ಮಾತನಾಡಿ, ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ ಕನಸನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಿದ್ದು ಡಾ.ವೀರೇಂದ್ರ ಹೆಗ್ಗಡೆಯವರು, ಯಾವುದನ್ನೂ ಉಚಿತವಾಗಿ ಕೊಡದೆ, ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಮೂಲಕ ಸ್ತ್ರೀಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವಲ್ಲಿ ಹೆಗ್ಗಡೆಯವರು ಶ್ರಮಿಸುತ್ತಿದ್ದಾರೆ, ಅನ್ನ, ವಿದ್ಯೆ, ಆರೋಗ್ಯ, ಅಭಯ ಮೊದಲಾಗಿ ಚತುರ್ವಿದ ದಾಸೋಹಕ್ಕೆ ಮುನ್ನುಡಿ ಹಾಡಿದ್ದಾರೆ ಎಂದು ಬಣ್ಣಿಸಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಸ್.ಅನಿಲ್ ಕುಮಾರ್, ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಶ್ರದ್ಧಾ ಅಮಿತ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಕೆ.ರಾಮ ಚಂದ್ರಗುಪ್ತ, ರಾಮಸ್ವಾಮಿ, ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಮೊದಲಾದವರು ಹಾಜರಿದ್ದರು.
ಮಂಜುನಾಥನೆಂದರೆ ಅಭಯ
ಜೀವನದ ಎಂಥ ದೊಡ್ದ ಸಮಸ್ಯೆ ಬಂದಾಗಲೂ, ಮಂಜುನಾಥ ಎಂದು ನೆನೆಸಿದ ಕ್ಷಣ, ನಮ್ಮ ಬೆನ್ನ ಹಿಂದೆ ಮಂಜುನಾಥನಿದ್ದಾನೆ ಎನ್ನುವ ಧೈರ್ಯ ಬರುತ್ತದೆ, ಮಂಜುನಾಥ ಸ್ವಾಮಿ ಎಂದರೆ ಅಭಯ, ನಾವು ಜನರಿಗೆ ನೀಡುವ ಅತಿ ದೊಡ್ಡ ಗಿಫ್ಟ್ ಎಂದರೆ, ಅಭಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಾವು ಮಹಿಳೆಯರ ಸಬಲೀಕರಣಕ್ಕೆ ಸಂಕಲ್ಪ ಮಾಡಿದ್ದೇವೆ, ನಮ್ಮ ಸ್ವಸಹಾಯ ಗುಂಪುಗಳಿಗೆ ನಾವು ನೀಡುವ ಅತಿದೊಡ್ಡ ಕಾಣಿಗೆ ಎಂದರೆ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭರವಸೆ, ಆದ್ದರಿಂದ ಇಂದು 65 ಕೋಟಿ ಲಾಭಾಂಶ ಗಳಿಸುವ ಮಟ್ಟಕ್ಕೆ ನಮ್ಮ ಸಂಘದ ಸದಸ್ಯರು ಬೆಳೆದಿದ್ದಾರೆ ಎಂದು ಡಾ. ವೀರೇಂದ್ರ ಹೆಗ್ಗಡೆಯವರು ಅಭಿಮಾನ ವ್ಯಕ್ತಪಡಿಸಿದರು.
Comments are closed.