ತುಮಕೂರು: ಜ್ಞಾನವೆಂಬುದು ಸಂಪತ್ತು, ಹಣ ಒಮ್ಮೆ ಬರಬಹುದು, ಹೋಗಲು ಬಹುದು, ಆದರೆ ಜ್ಞಾನ ಒಮ್ಮೆ ನಿಮ್ಮೊಳಗೆ ಬಂದರೆ ಅದು ನಿರಂತರ ವೃದ್ಧಿಯಾಗುತ್ತದೆ, ಹಾಗಾಗಿ ನೀವು ಜ್ಞಾನವಂತರಾಗಲು ಹೆಚ್ಚಿನ ಗಮನ ನೀಡಿ, ನಂತರ ಸಂಪತ್ತು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಶಿವಚಿತ್ತಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್ ಎಸ್ ಎಸ್, ಯುವ ರೆಡ್ ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ನಿಮ್ಮ ಗುರಿ ಏನೇ ಇರಲಿ ಅದಕ್ಕೆ ತಕ್ಕದಾದ ಜ್ಞಾನ ಸಂಪಾದಿಸಿ ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ದೊರೆಯುತ್ತದೆ ಎಂದರು.
ನಿಮ್ಮ ತಂದೆ ತಾಯಿಗಳು ನಿಮ್ಮಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ, ಅದರ ಜೊತೆಗೆ ನಿಮ್ಮ ಮುಂದೆ ಅನೇಕ ಆಕರ್ಷಣೆಗಳಿವೆ, ಬಾಹ್ಯ ಆಕರ್ಷಣೆಗಳಿಂದ ದೂರವಾದರೆ ಸಾಧನೆ ನಿಮ್ಮದಾಗುತ್ತದೆ, ಲಾಯರ್, ಇಂಜಿನಿಯರ್, ಉಪನ್ಯಾಸಕ, ರಾಜಕಾರಣಿಯಾಗಲು ಅವಕಾಶಗಳ ಬಾಗಿಲು ತೆರೆದಿದೆ, ಆಯ್ಕೆ ನಿಮ್ಮದು, ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಿ, ಇದಕ್ಕೆ ಪೂರಕವಾಗಿ ನಿಮ್ಮಗೆ ಎನ್ ಎಸ್ ಎಸ್, ರೆಡ್ ಕ್ರಾಸ್, ಕಲೆ ಮತ್ತು ಕ್ರೀಡಾ ಚಟುವಟಿಕೆಗಳು ಸಹಕಾರಿ ಆಗಲಿವೆ, ಸರಿದಾರಿಯಲ್ಲಿ ನಿರಂತರ ಪರಿಶ್ರಮದಿಂದ ಮುನ್ನಡೆದರೆ ವೇದಿಕೆಯ ಮುಂದಿರುವ ನೀವು ಮುಂದೊಂದು ದಿನ ವೇದಿಕೆಯ ಮೇಲೆ ನಿಂತು ನನ್ನಂತೆಯೇ ಸಾವಿರಾರು ಯುವ ಜನರಿಗೆ ಮಾರ್ಗದರ್ಶನ ಮಾಡಬಹುದು ಎಂದರು.
ಜಾನಪದ ಕಲಾವಿದರಾದ ಅಮ್ಮ ರಾಮಚಂದ್ರಪ್ಪ ಮಾತನಾಡಿ, ನಾನು ಕ್ರಮಬದ್ದ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿಲ್ಲ, ಆದರೂ ರಾಷ್ಟ್ರಮಟ್ಟದ ಪ್ರಶಸ್ತಿ ತಂದುಕೊಟ್ಟಿದ್ದೇನೆ, ಇದು ಸಂಗೀತಕ್ಕೆ ಇರುವ ಶಕ್ತಿ, ಕಡು ಬಡತನದಲ್ಲಿಯೇ ಹುಟ್ಟಿ, ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ನನ್ನನ್ನು ಇದುವರೆಗೂ ಸಾಕಿ ಸಲಹಿರುವುದು ಈ ಜನಪದ ಸಂಗೀತ, ಬಡತನವೇ ನನ್ನ ಗುರು, ಕಾಲಲ್ಲಿ ಚಪ್ಪಲಿ ಇಲ್ಲದೆ ವೇದಿಕೆ ಹತ್ತಿ ಪ್ರಶಸ್ತಿ ಸ್ವೀಕರಿಸಿದ ದಿನಗಳು ನನ್ನನ್ನು ಏನಾದರೂ ಸಾಧಿಸುವ ಛಲ ಹುಟ್ಟು ಹಾಕಿದವು, ಅದರ ಫಲವಾಗಿ ರಾಷ್ಟ್ರಮಟ್ಟದ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದು ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರಿಂದ ಒಂದು ಲಕ್ಷ ರೂ. ಬಹುಮಾನವಾಗಿ ಪಡೆದೆ,ಆ ಸಾರ್ಥಕ ಕ್ಷಣಗಳನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವೇ ಇಲ್ಲ, ಶಿಕ್ಷಣದ ಜೊತೆಗೆ ಕಲೆ ಮೈಗೂಡಿಸಿಕೊಳ್ಳಿ, ನಿಮ್ಮ ಜೀವನ ಬಂಗಾರವಾಗಲಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ, ಎನ್ ಎಸ್ ಎಸ್ ಹಲವಾರು ವಿದ್ಯಾರ್ಥಿ ಯುವ ಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ವೇದಿಕೆಯಾಗಿದೆ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಕೇವಲ ಅಂಕ ಪಡೆಯಲಷ್ಟೇ ಸಿಮೀತವಾಗದೆ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ, ಇಂದು ಮಕ್ಕಳಿಗೆ ಆರು ವಿವಿಧ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಂಡಿದ್ದು, ಒಂದೊಂದು ಸ್ಪರ್ಧೆಗೆ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿದ್ದು, ಸ್ಪರ್ಧೆಗಳಲ್ಲಿ ಉತ್ಸುಕತೆಯಿಂದ ಭಾಗವಹಿಸಿ ನಿಮ್ಮ ಪ್ರತಿಭೆ ಪ್ರದರ್ಶಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ.ಶೀಲ.ಕೆ.ಪಿ, ದಿವ್ಯ, ಪಾವನ, ಶ್ವೇತ.ಸಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
Comments are closed.