ಕುಣಿಗಲ್: ಶನಿವಾರ ಬೆಳಗ್ಗೆ ಶಾಸಕ ಡಾ.ರಂಗನಾಥ್ ಪುರಸಭೆ ಅಧಿಕಾರಿ, ಸದಸ್ಯರೊಂದಿಗೆ ಪಟ್ಟಣದ ವಿವಿಧ ವಾರ್ಡ್ಗಳಿಗೆ ದಿಢೀರ್ ತಪಾಸಣೆ ನಡೆಸಿ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವಂತೆ, ನಿರ್ಲಕ್ಷ್ಯ ತೋರಿದ ಪರಿಸರ ಇಂಜಿನಿಯರ್ ಅಮಾನತಿಗೆ ಸೂಚನೆ ನೀಡಿದರು.
ಶನಿವಾರ ಬೆಳಗ್ಗೆ ವೈಕುಂಠಏಕಾದಶಿ ಪ್ರಯುಕ್ತ ಐದುವರೆ ಗಂಟೆಗೆ ಪತ್ನಿಯೊಂದಿಗೆ ವಿವಿಧ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಪುರಸಭೆ ಸದ್ಯರೊಂದಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿ ಸ್ವಚ್ಛತೆ ನಿರ್ವಹಣೆ ಮಾಡದ ಬಗ್ಗೆ ಅಧಿಕಾರಿಗಳ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು, 18ನೇ ವಾರ್ಡ್ಗೆ ಹೊಂದಿಕೊಂಡ ಮುಖ್ಯ ರಸ್ತೆಯಲ್ಲೆ ಕಸದ ರಾಶಿ ಬಗ್ಗೆ ಆರೋಗ್ಯ ನಿರೀಕ್ಷಕ ಮುನಿಸ್ವಾಮಿ, ಶ್ರೀಕಾಂತ್ ಅವರನ್ನು ಪ್ರಶ್ನಿಸಿದಾಗ ಆರೋಗ್ಯ ನಿರೀಕ್ಷಕರು ಕಸ ನಿರ್ವಹಣೆ ವಿಭಾಗದವರು ನಮ್ಮ ಮಾತು ಕೇಳೊದಿಲ್ಲ ಎಂದರು.
ಮುಖ್ಯಾಧಿಕಾರಿ ಶಿವಪ್ರಸಾದ್, ಆರೋಗ್ಯನಿರೀಕ್ಷಕರು ಹೊಸಬರು, ಕಸ ನಿರ್ವಹಣೆ ಸಿಬ್ಬಂದಿ ಮೇಸ್ತ್ರಿ ಹಳಬರು, ಹೀಗಾಗಿ ಮೇಸ್ತ್ರಿಗೆ ಸದಸ್ಯರ ಬೆಂಬಲ ಇದೆ, ಇದು ಸಮಸ್ಯೆ ಎಂದಾಗ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕಸ ನಿರ್ವಹಣೆಯಲ್ಲಿ ಮಧ್ಯ ಪ್ರವೇಶಿಸುವ ಸದಸ್ಯರನ್ನೆ ಕಸ ಎತ್ತಲು ಹೇಳಿ, ಕಠಿಣ ಕ್ರಮ ಕೈಗೊಳ್ಳಿ, ಪಟ್ಟಣದಲ್ಲಿ ಸಮರ್ಪಕ ಕಸ ವಿಲೇವಾರಿ ಆಗಬೇಕು ಅಷ್ಟೆ ಎಂದರು.
ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವ ಪರಿಸರ ಇಂಜಿನೀಯರ್ ಚಂದ್ರಶೇಖರ್ ಅಮಾನತು ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
18ನೇ ವಾರ್ಡ್ಗೆ ಹೊಂದಿಕೊಂಡಿರುವ ಹೌಸಿಂಗ್ಬೋರ್ಡ್ ಪ್ರದೇಶದ ಕೊಳಚೆ ನೀರು ಸರಿಯಾಗಿ ಹರಿಯದೆ ಕೆಲವೆಡೆ ದೊಡ್ಡಕೆರೆ ಸೇರುತ್ತಿರುವ ಬಗ್ಗೆ ಪರಿಶೀಲಿಸಿ, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ಐದು ಕೊಟಿ ರೂ. ವೆಚ್ಚದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸುವ ಭರವಸೆ ನೀಡಿದರು. ಫುಟ್ ಪಾತ್ ಒತ್ತುವರಿ ಬಗ್ಗೆ ಸದಸ್ಯರು ಗಮನ ಸೆಳೆದರೂ ಶಾಸಕರು ಸೂಕ್ತ ಉತ್ತರ ನೀಡಲಿಲ್ಲ, ಸದಸ್ಯರಾದ ಶ್ರೀನಿವಾಸ್, ದೇವರಾಜು, ಸಮೀವುಲ್ಲಾ, ಮಾಜಿ ಸದಸ್ಯರಾದ ಪಾಪಣ್ಣ, ಚಂದ್ರಶೇಖರ್ ಇತರರು ಇದ್ದರು.
Comments are closed.