ಕಲ್ಪತರು ನಾಡಲ್ಲಿ ವೈಕುಂಠ ಏಕಾದಶಿ ವೈಭವ

ವೆಂಕಟೇಶ್ವರ ಸ್ವಾಮಿ ಆಲಯಗಳಲ್ಲಿ ವಿಶೇಷ ಅಲಂಕಾರ- ಭಕ್ತರಿಂದ ಪೂಜೆ

40

Get real time updates directly on you device, subscribe now.


ತುಮಕೂರು: ಕಲ್ಪತರುನಾಡಿನಲ್ಲಿ ವೈಕುಂಠ ಏಕಾದಶಿಯನ್ನು ಸಡಗರ ಸಂಭ್ರದೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.
ಇಲ್ಲಿನ ಬಟವಾಡಿಯ ವೆಂಕಟೇಶ್ವರ ಸ್ವಾಮಿ ದೇವಾಲಯ, ಜಯನಗರ ರಿಂಗ್ ರಸ್ತೆಯ ತಿರುಮಲ ನಗರ ದಕ್ಷಿಣದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಸರಸ್ವತಿ ಪುರಂನ ವೆಂಕಟೇಶ್ವರ ಸ್ವಾಮಿ ದೇಗುಲ, ಜಯನಗರದ ಪದ್ಮಾವತಿ ವೆಂಕಟೇಶ್ವರ ಸ್ವಾಮಿ ದೇವಾಲಯ, ಟಿಜಿಎಂಸಿ ಬ್ಯಾಂಕ್ ಮುಂಭಾಗದ ಮಹಾಲಕ್ಷ್ಮಿ ದೇವಾಲಯ, ಶಿರಾಗೇಟ್ ನ ದೇವಾಲಯ, ಸೋಮೇಶ್ವರ ಪುರಂನ ಗೋಪಾಲಕೃಷ್ಣ ದೇವಾಲಯ, ಶಾಂತಿ ನಗರದ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯ, ತುಮಕೂರು ತಾಲ್ಲೂಕು ಚಿಕ್ಕಸಾರಂಗಿಯ ಶ್ರೀ ತೋಪಿನ ರಂಗನಾಥ ಸ್ವಾಮಿ ದೇವಾಲಯ, ತುರುವೇಕೆರೆ ತಾಲ್ಲೂಕಿನ ಮುದುಗೆರೆ ಸಮೀಪದ ಶ್ರೀ ಕೋಡಿ ರಂಗನಾಥ ಸ್ವಾಮಿ ದೇವಾಲಯ, ಸಂಪಿಗೆಯ ವೆಂಕಟೇಶ್ವರ ಸ್ವಾಮಿ ದೇವಾಲಯ ಹಾಗೂ ಗುಬ್ಬಿಯ ಬೇಟೆರಾಯ ಸ್ವಾಮಿ ದೇವಾಲಯ, ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಶನಿವಾರ ಮುಂಜಾನೆಯಿಂದಲೇ ಭಕ್ತಾದಿಗಳು ವೆಂಕಟೇಶ್ವರ ಸ್ವಾಮಿ ದೇವಾಲಯಗಳಿಗೆ ತೆರಳಿ ವೈಕುಂಠ ದರ್ಶನದೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ವೈಕುಂಠ ಏಕಾದಶಿ ಅಂಗವಾಗಿ ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಸುಪ್ರಭಾತ ಸೇವೆ, ತೋಮಾಲೆ ಸೇವೆ, ಪಂಚಾಂಗ ಶ್ರವಣ, ಪಂಚಾಮೃತ ಅಭಿಷೇಕ, ಸಹಸ್ರನಾಮ ಅರ್ಚನೆ, ವಿಶೇಷ ಅಲಂಕಾರ, ಉಯ್ಯಾಲೆ ಸೇವೆ, ಪ್ರಕಾರೋತ್ಸವಗಳು ಜರುಗಿದವು.
ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ಬಗೆ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು, ಹಾಗೆಯೇ ದೇವರ ಮೂರ್ತಿಗಳಿಗೂ ವೈಭವೋಪೇತ ಅಲಂಕಾರ ಮಾಡಲಾಗಿತ್ತು, ಭಕ್ತರ ದರ್ಶನಕ್ಕಾಗಿ ಯಾವುದೇ ರೀತಿಯ ತೊಂದರೆಗಳಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

ಭಕ್ತಾದಿಗಳು ಸಹ ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು, ಈ ಎಲ್ಲ ದೇವಾಲಯಗಳಲ್ಲೂ ಭಕ್ತಾದಿಗಳಿಗೆ ವೈಕುಂಠ ಏಕಾದಶಿ ಅಂಗವಾಗಿ ಲಾಡು ಸೇರಿದಂತೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ವೆಂಕಟೇಶ್ವರನ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಗೋವಿಂದನ ನಾಮಸ್ಮರಣೆ ಮೊಳಗಿದವು, ನಗರದ ವಿವಿಧ ಬಡಾವಣೆಗಳಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮುಂಜಾನೆಯಿಂದಲೇ ವಿಶೇಷ ಪೂಜಾದಿಗಳು ನೆರವೇರಿದ್ದು, ಭಕ್ತರಿಗೆ ವೈಕುಂಠ ಏಕಾದಶಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಹುಳಿಯಾರಿನ ಇತಿಹಾಸ ಪ್ರಸಿದ್ದ ಅನಂತ ಶಯನ ಲಕ್ಷ್ಮಿರಂಗನಾಥ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ನೆರವೇರಿತು, ಸಪ್ತದಾರ ವೈಕುಂಠ ದರ್ಶನದ ಮೂಲಕ ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಗಳಲ್ಲಿ ಕೊರೆವ ಚಳಿಯನ್ನು ಲೆಕ್ಕಿಸದೆ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.

Get real time updates directly on you device, subscribe now.

Comments are closed.

error: Content is protected !!