ಕುಣಿಗಲ್: ಪ್ರಸ್ತುತ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರ ಅಘಾದವಾಗಿ ಬೆಳೆಯುತ್ತಿದ್ದು ಔದ್ಯೋಗಿಕ ರಂಗದಲ್ಲಿ ಮಾನವ ಸಂಪನ್ಮೂಲಕ್ಕೆ ಸವಾಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ, ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ, ಕೌಶಲ್ಯ ಮತ್ತು ಆತ್ಮಸ್ಥೈರ್ಯ ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023 -24ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ಯುವ ರೆಡ್ ಕ್ರಾಸ್, ಐಕ್ಯೂಎಸಿ, ರೋವರ್ಸ್ ಮತ್ತು ರೇಂಜರ್ಸ್ ಇತರ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಪದ್ಧತಿ ಜೊತೆಯಲ್ಲಿ ವಿದ್ಯಾರ್ಥಿಗಳು ಔದ್ಯೋಗಿಕ ರಂಗದಲ್ಲಿ ಎದುರಾಗುತ್ತಿರುವ ಸವಾಲುಗಳ ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕು, ಯುವ ಜನಾಂಗ ಪದವಿಯ ಹಂತದಲ್ಲಿ ತಮ್ಮ ಉದ್ಯೋಗದ ಕ್ಷೇತ್ರವನ್ನು ಬಹು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳುವ ಅಗತ್ಯ ಇದೆ, ಜೀವನದ ಯಾವುದೇ ಒತ್ತಡಗಳಿಗೆ ಒಳಗಾಗದೆ ಅದನ್ನು ನಿವಾರಿಸಿಕೊಳ್ಳುವ ಸರಳ ಮಾರ್ಗ ಅರಿತು, ತಂದೆ ತಾಯಿಗಳಿಗೆ, ಸಮಾಜಕ್ಕೆ ಉತ್ತಮ ಹೆಸರು ತರಬೇಕೆಂದರು.
ಸಾಹಿತಿ, ಉಪನ್ಯಾಸಕ ಡಾ. ನವೀನ್ ಹಳೇಮನೆ ಮಾತನಾಡಿ, ಇಂದಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕ ಬದುಕನ್ನು ವಿಸ್ತರಿಸಿಕೊಳ್ಳಲು ಸಾಕಷ್ಟು ಅವಕಾಶ ಒದಗಿಸುತ್ತಿದೆ, ಈ ನಿಟ್ಟಿನಲ್ಲಿ ಯುವ ಜನಾಂಗ ಆಸಕ್ತಿ ವಹಿಸಿ, ಪ್ರಯೋಜನ ಪಡೆದುಕೊಂಡು ಅದಮ್ಯ ಚೇತನಗಳಾಗಿ ಹೊರ ಹೊಮ್ಮಬೇಕಿದೆ ಎಂದರು.
ಪ್ರಾಂಶುಪಾಲೆ ಪ್ರೊ.ಮಾಯಾ ಸಾರಂಗಪಾಣ ಅಧ್ಯಕ್ಷತೆ ವಹಿಸಿದ್ದರು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಬಿ.ಟಿ.ರಂಗಸ್ವಾಮಿ, ಅಬ್ದುಲ್ ರೆಹಮಾನ್, ಚಂದ್ರಶೇಖರ್, ಪಾಪಣ್ಣ, ಪುರಸಭೆ ಸದಸ್ಯರಾದ ಶ್ರೀನಿವಾಸ್, ಸಮೀವುಲ್ಲಾ, ನಾಗೇಂದ್ರ, ಮಾಜಿ ಸದಸ್ಯ ಚಂದ್ರಶೇಖರ, ಮುಖ್ಯಾಧಿಕಾರಿ ಶಿವಪ್ರಸಾದ್, ಹಿರಿಯ ಪ್ರಾಧ್ಯಾಪಕ ಪ್ರೊ.ರಾಮಾಂಜನಪ್ಪ, ಐಕ್ಯೂಎಸಿ ಸಂಚಾಲಕ ಡಾ.ಜೆ.ಶಿವಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಹಾಗೂ ಕನ್ನಡ ಸಹ ಪ್ರಾಧ್ಯಾಪಕ ಡಾ.ಎಂ.ಗೋವಿಂದರಾಯ, ಎನ್ ಎಸ್ ಎಸ್ ಅಧಿಕಾರಿ ಹನುಮಂತಪ್ಪ, ನಾಗಮ್ಮ.ಎಚ್.ಎನ್, ಸುರೇಶ್ ಬೊಮ್ಮನಾಳ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಿ.ಎಸ್ ರವೀಶ್ ಇತರರು ಇದ್ದರು.
Comments are closed.