ತುಮಕೂರು: ಕನ್ನಡ ಸಾಹಿತ್ಯ ಪರಿಷತ್ ಉಳ್ಳವರ ಜಗಲಿಯಾಗಬಾರದು, ಕನ್ನಡಕ್ಕಾಗಿ ಕೆಲಸ ಮಾಡಿದ, ಜನಸಾಮಾನ್ಯರ ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿಯಬೇಕೆಂಬ ಉದ್ದೇಶದಿಂದ 2021ರ ಮೇ 09 ರಂದು ನಡೆಯುವ ಕಸಾಪ ಚುನಾವಣೆಯಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಪ್ಪಳ ಜಿಲ್ಲೆಯವನಾದ ನಾನು 2009 ಮತ್ತು 2014ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದು, ಹಲವಾರು ಕಾರ್ಯಾಗಾರ, ಸಮ್ಮೇಳನ, ಕಮ್ಮಟಗಳನ್ನು ಮಾಡಿ ಅನುಭವ ಹೊಂದಿದ್ದು, ಎಲ್ಲಾ ದೃಷ್ಟಿಯಿಂದಲೂ ನಿರ್ಲಕ್ಷಕ್ಕೆ ಒಳಗಾಗಿರುವ ಕಲ್ಯಾಣ ಕರ್ನಾಟಕದ ಭಾಗದಿಂದ ಓರ್ವರು ಅಧ್ಯಕ್ಷರಾಗಬೇಕು ಎಂದು ಹಲವಾರು ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಜನಸಾಮಾನ್ಯರ ದ್ವನಿಯಾಗಿ ಈ ಬಾರಿ ಕಣಕ್ಕೆ ಇಳಿದಿರುವುದಾಗಿ ನುಡಿದರು.
ಪರಿಷತ್ತಿನ ಕಾರ್ಯ ಕಲಾಪಗಳು ಕೇಂದ್ರೀಕೃತಗೊಳ್ಳಬಾರದು, ವಿಕೇಂದ್ರೀಕರಣಗೊಳ್ಳಬೇಕೆಂಬ ಆಶಯ ನನ್ನದು, ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಕಸಾಪ ಕಾರ್ಯಕ್ರಮಗಳನ್ನು ಬೆಂಗಳೂರು ನಗರದ ಹೊರಗೆ ನಡೆಸುವ ಮೂಲಕ ಜನಸಾಮಾನ್ಯರಿಗೆ ಪರಿಷತ್ ನಮ್ಮದು ಎಂಬ ಭಾವನೆ ಬರುವಂತೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ, ಅಲ್ಲದೆ ಯುವ ಜನಾಂಗ ಹೆಚ್ಚಿನ ರೀತಿಯಲ್ಲಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಉತ್ತೇಜನ ನೀಡಲು ಹಲವಾರು ಕಾರ್ಯಕ್ರಮ ರೂಪಿಸುವ ಗುರಿ ಹೊಂದಿರುವುದಾಗಿ ಸಂಗಮೇಶ್ ಬಾದವಾಡಗಿ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಕಾಲ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅನುಭವ ಬಳಸಿಕೊಂಡು ಗಡಿ ಭಾಗದಲ್ಲಿ ಕನ್ನಡದ ಚಟುವಟಿಕೆ ನಡೆಸಲು ಉತ್ಸುಕನಾಗಿದ್ದೇನೆ, ಈ ಹಿಂದೆ ಹಲವರು ಜಾರಿಗೆ ತಂದಿದ್ದ ಉಪಯುಕ್ತ ಯೋಜನೆಗಳನ್ನು ಮುಂದುವರೆಸಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಕೇಂದ್ರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ಇದುವರೆಗೂ 27 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ, ಪರಿಷತ್ ಎಂಬುದು ರಾಜಕೀಯ ಅಖಾಡವಲ್ಲ, ಅದು ಕನ್ನಡಿಗರನ್ನು ಪ್ರಾತಿನಿಧಿಕ ಸಂಸ್ಥೆಯಾಗಬೇಕು ಎಂಬುದು ನಮ್ಮ ಉದ್ದೇಶ, ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯಾಸಕ್ತರು, ಕನ್ನಡ ಪರಿಚಾರಕರು ನನಗೆ ಮತ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಸಂಗಮೇಶ ಬಾದವಾಡಗಿ ನುಡಿದರು.
ಈ ವೇಳೆ ಸಾಹಿತಿಗಳಾದ ಎಸ್.ವಿ.ಪೂಜಾರ್, ಕೆ.ಪಿ.ಚಂದ್ರಹಾಸ್, ತಾ.ಸಿ.ತಿಮ್ಮಯ್ಯ ಮತ್ತಿತರರು ಇದ್ದರು.
ಕಸಾಪ ಉಳ್ಳವರ ಜಗಲಿಯಾಗಬಾರದು: ಸಂಗಮೇಶ
Get real time updates directly on you device, subscribe now.
Comments are closed.