ಶಿರಾ: ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಡಿ.26 ರಂದು ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಂಸ್ಕೃತಿ ಚಿಂತಕ, ಸಾಹಿತಿ, ಪತ್ರಕರ್ತ ರಘುನಾಥ.ಚ.ಹ ಆಯ್ಕೆಯಾಗಿದ್ದಾರೆ.
ಕನ್ನಡ ಸಂಸ್ಕೃತಿಗೆ ಹಿರಿದಾದ ಅಂತಸ್ಸತ್ವವಿದೆ, ಭವ್ಯ ಪರಂಪರೆಯಿದೆ, ಅನೇಕ ಶತಮಾನಗಳ ಅವಧಿಯಲ್ಲಿ ಸುಂದರವಾದುದ್ದನ್ನು, ಸತ್ಯವಾದುದನ್ನು ಮೈಗೂಡಿಸಿಕೊಂಡ ಈ ಸಂಸ್ಕೃತಿ ಇಂದು ಸೊಂಪಾಗಿ ಬೆಳೆದಿದೆ, ಹಳೆಯದನ್ನು ಮರೆಯದೆ, ಹೊಸತನ್ನು ಅಲಕ್ಷಿಸದೆ, ಉತ್ತಮಾಂಶಗಳನ್ನು ತನ್ನದಾಗಿಸಿಕೊಂಡು ಕರ್ನಾಟಕ ಸಂಸ್ಕೃತಿ ವಿಶಿಷ್ಟ ಘನತೆಯನ್ನು ಔನ್ಯತ್ಯ ಕಾಪಾಡಿಕೊಂಡು ಬಂದಿದೆ, ನಮ್ಮ ಜನ ಬಾಳಿದ ಬಗೆ, ನಂಬಿದ ಮೌಲ್ಯಗಳು, ಅನುಸರಿಸಿದ ಆಚಾರ- ವಿಚಾರ ನಮ್ಮ ಸಾಹಿತ್ಯ ಕಲಾ ಪ್ರಕಾರಗಳಲ್ಲಿ ಅಚ್ಚಳಿಯದೆ ಪ್ರತಿಬಿಂಬಿಸಿವೆ, ಅಂದು ಕಲೆ, ಸಾಹಿತ್ಯ, ಸಂಸ್ಕೃತಿ ವರ್ಧನೆಗೆ ರಾಜಾಶ್ರಯವಿತ್ತು, ಇಂದು ಜನತೆಯ ಸರ್ಕಾರ ಈ ಹೊಣೆ ಹೊತ್ತಿದೆ.
ಕನ್ನಡ ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು, ಪಂಪರನ್ನಾದಿ ಜೈನಕವಿಗಳೂ ಹರಿಹರ ರಾಘವಾಂಕ ಚಾಮರಸ, ಲಕ್ಷ್ಮೀಶ ಕುಮಾರ ವ್ಯಾಸ ರತ್ನಾಕರ ವರ್ಣಿಯೇ ಮುಂದಾದವರೂ, ಮಾಸ್ತಿ, ಬೇಂದ್ರೆ, ಕುವೆಂಪು, ಕಾರಂತ, ಕಂಬಾರ, ಯು.ಆರ್.ಅನಂತ ಮೂರ್ತಿ ಮುಂತಾದ ಆಧುನಿಕರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ನಾಟಕ, ಚಿತ್ರಕಲೆ, ಜಾನಪದ, ನಿಸರ್ಗ ಸಂಪತ್ತು ಕಡಿಮೆಯೇನಲ್ಲ, ಇಲ್ಲಿಯ ನೆಲ, ಜಲ, ಖನಿಜ ಎಲ್ಲವೂ ವೈವಿಧ್ಯಮಯ, ಪ್ರಾಣಿ ಸಂಕುಲ, ಸಸ್ಯಸಂಕುಲ, ಹುಲಿ, ಚಿರತೆ, ಆನೆ, ಕಾಡೆಮ್ಮೆ, ಶ್ರೀಗಂಧ, ಕಾಫಿ, ಚಿನ್ನ, ಕಬ್ಬಿಣ, ರೇಷ್ಮೆ ಎಲ್ಲಕ್ಕೂ ಪ್ರಸಿದ್ದ, ಶಿವನ ಸಮುದ್ರದಲ್ಲಿ ಮೊದಲ ಬಾರಿಗೆ ಜಲ ವಿದ್ಯುತ್ ಶಕ್ತಿ ಉತ್ಪಾದಿಸಿದ ಕೀರ್ತಿ ಹಳೆಯ ಮೈಸೂರಿನ ಯಧುವಂಶೀಯ ದೊರೆಗಳಿಗೆ ಸಲ್ಲುತ್ತದೆ.
ಕರ್ನಾಟಕದಲ್ಲಿಯ ಇತಿಹಾಸ ಅಶೋಕನ ಕಾಲದಿಂದಲೂ ಗುರುತಿಸಲ್ಪಟ್ಟಿದೆ, ಪ್ರಾಚೀನ ಪ್ರಾಗೈತಿಹಾಸಿಕ ನೆಲೆಗಳು ಇವೆ, ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ನೊಳಂಬ, ಹೊಯ್ಸಳ, ವಿಜಯನಗರ, ಮೈಸೂರಿನ ಒಡೆಯರು, ಟಿಪ್ಪುಸುಲ್ತಾನ್, ಸ್ಥಳೀಯ ಪಾಳೇಗಾರರು ಆಳಿಬಾಳಿರುವ ಐತಿಹಾಸಿಕ ಮಹತ್ವಗಳಿವೆ.
ಅಕ್ಷರ ಕಲಿಸುವ ಶಿಕ್ಷಕರಾಗಿದ್ದ ಚನ್ನಿಗರಾಯಪ್ಪ.ಎಚ್.ಎನ್. ಮತ್ತು ಮಮತಾ ಮಯಿ ರತ್ನಮ್ಮ ಅವರ ಪುತ್ರರಾಗಿ ನವೆಂಬರ್ 1.1974 ರಲ್ಲಿ ಜನಿಸಿದರು ರಘುನಾಥ.ಚ.ಹ, ಶಿರಾ ತಾಲ್ಲೂಕಿನ ಪಟ್ಟನಾಯಕನ ಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು.
ಕನ್ನಡ ಎಂಎ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಪ್ರಜಾವಾಣಿ ಬಳಗದ ಸುಧಾ, ಮಯೂರ ಪತ್ರಿಕೆಗಳ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ (ಕಥೆಗಳು), ರಾಗಿಮುದ್ದೆ (ಪ್ರಬಂದ ಸಂಕಲನ), ಚೆಲ್ಲಾಪಿಲ್ಲಿ (ಲೇಖನಗಳು), ವ್ಯಂಗ್ಯಚಿತ್ರ ವಿಶ್ವರೂಪ (ಕಾರ್ಟೂನ್ ಗಳ ಇತಿಹಾಸ), ಆರ್.ನಾಗೇಂದ್ರ ರಾವ್, ಡಾ.ದೇವಿಶೆಟ್ಟಿ, ಬಿಲ್ ಗೇಟ್ಸ್, ಅಣ್ಣಾ ಹಜಾರೆ (ಜೀವನ ಚಿತ್ರಗಳು), ಸತಿ ಸುಲೋಚನಾ ( ಕನ್ನಡದ ಮೊದಲ ವಾಕ್ಚಿತ್ರದ ಕಥನ), ಚಂದನವನದ ಚಿನ್ನದ ಹೂಗಳು, ಬೆಳ್ಳಿತೆರೆ, ನಮೋ ವೆಂಕಟೇಶ (ಸಿನಿಮಾ ಬರಹಗಳು), ಪುಟ್ಟಲಕ್ಷ್ಮೀ ಕಥೆಗಳು, ಜಾಮೂನು ಪದ್ಯಗಳು (ಮಕ್ಕಳ ಸಾಹಿತ್ಯ), ಹಾಗೂ ಅಂಕಣ ವ್ಯಾಯೋಗ ಪ್ರಕಟಿತ ಕೃತಿಗಳು, ಕನ್ನಡ ಪತ್ರಿಕೋದ್ಯಮದ ಕಟ್ಟಾಳು ಎಂ.ಬಿ.ಸಿಂಗ್ ಸಂಪಾದಿತ ಕೃತಿ, ಉಳಿದಾವ ಮಾತು, ಸಂದರ್ಶನ ಬರಹಗಳ ಸಂಕಲನ, ಪ್ರಥಮ ಬುಕ್ಸ್ ಸಂಸ್ಥೆಗಾಗಿ ಹವಲು ಮಕ್ಕಳ ಕೃತಿಗಳ ಅನುವಾದ ಮಾಡಿದ್ದಾರೆ.
ಕಥೆಗಳಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದ ದತ್ತಿನಿಧಿ ಬಹುಮಾನ ಹಾಗೂ ಚಿನ್ನದ ಪದಕ, ಕಥಾರಂಗಂ ಪ್ರಶಸ್ತಿ, ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ದೊರೆತಿದೆ, ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ, ವರ್ಧಮಾನ ಪ್ರಶಸ್ತಿ ಹಾಗೂ ಕೆ.ಸಾಂಬಶಿವಪ್ಪ ಸ್ಮಾರಕ ಪ್ರಶಸ್ತಿ ದೊರೆತಿವೆ. ಜಾಮೂನು ಪದ್ಯಗಳು ಸಂಕಲನಕ್ಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ, ಬೆಳ್ಳಿತೊರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ವೀಚಿ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಅರಗಿಣಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತನ ಶ್ರೀವಿಜಯ ಪ್ರಶಸ್ತಿ ಹಾಗೂ ನರಹಳ್ಳಿ ಪ್ರಶಸ್ತಿಗಳು ಸಂದಿವೆ.
ಸಾಹಿತ್ಯಕ್ಕೆ ಸಂಬಂದಿಸಿದ ವಿವಿಧ ಕಥೆ, ಕಾವ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ, ಪ್ರಜಾವಾಣಿಯ ಸಾಪ್ತಾಹಿಕ ಪುರವಣೆ, ಸಿನಿಮಾ ಪುರವಣೆಗಳ ಉಸ್ತುವಾರಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಂಘಟನಾ ಸಮಿತಿ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಚಂದನವನ (ಕನ್ನಡ ಚಲನಚಿತ್ರ ಇತಿಹಾಸ) ಕೃತಿಯ ಸಂಪಾಕರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ, ಬೆಂಗಳೂರಿನ, ರುಕ್ಮಿಣಿ ನಗರದ ನಂ.34, ಮಹತಿ, 4ನೇ ಮುಖ್ಯರಸ್ತೆ, 4ನೇ ಕ್ರಾಸ್ ನಲ್ಲಿ ವಾಸವಾಗಿದ್ದಾರೆ, ರಘುನಾಥ.ಚ.ಹ ಬಯಲು ಸೀಮೆ ಸಿರಿಯಣ್ಣ ದೇವಣ್ಣರ ತವರೂರಿನ ಸಿರವಂತ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದು, ಯುವ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
Comments are closed.