ತುಮಕೂರು: ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾದ ಕ್ರಿಸ್ ಮಸ್ ಹಬ್ಬವನ್ನು ನಗರ ಸೇರಿದತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಚರ್ಚ್ ಸರ್ಕಲ್ ನಲ್ಲಿರುವ ಸಿ ಎಸ್ ಐ ವೆಸ್ಲಿ ದೇವಾಲಯ, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ಸಿ ಎಸ್ ಐ ಲೇಔಟ್ ನ ಚರ್ಚ್, ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಚರ್ಚ್, ದೇವನೂರು ಚರ್ಚ್, ಶಿರಾ ಗೇಟ್ ನಲ್ಲಿರುವ ಚರ್ಚ್ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿರುವ ಚರ್ಚ್ಗಳಲ್ಲಿ ಕ್ರೈಸ್ತ ಬಾಂಧವರು ಸೋಮವಾರ ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ನಗರದಲ್ಲಿರುವ 7 ಸಿ ಎಸ್ ಐ ಚರ್ಚ್, ಎರಡು ರೋಮನ್ ಕ್ಯಾಥೋಲಿಕ್ ಚರ್ಚ್, ಒಂದು ಮಾರ್ಥಾಂಬ ಚರ್ಚ್, ಒಂದು ಫೆದರಲ್ ಚರ್ಚ್, 15 ಇಂಡಿಪೆಂಡೆಂಟ್ ಚರ್ಚ್ಗಳು ಸೇರಿದಂತೆ ಎಲ್ಲಾ ಚರ್ಚ್ಗಳಲ್ಲಿ ವಿಶೇಷವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿದ್ದವು.
ಕ್ರೈಸ್ತ ಬಾಂಧವರು ಹೊಸ ಉಡುಪುಗಳನ್ನು ಧರಿಸಿ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಒಬ್ಬರಿಗೊಬ್ಬರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು, ಹಬ್ಬದ ವಿಶೇಷವಾಗಿ ತಯಾರಿಸಿದ್ದ ಸಿಹಿ ತಿಂಡಿಗಳನ್ನು ಸಹ ಕ್ರೈಸ್ತ ಬಾಂಧವರು ಪರಸ್ಪರ ಹಂಚಿ ತಿನ್ನುವ ಮೂಲಕ ಈ ಹಬ್ಬ ಶಾಂತಿ ಸೌಹಾರ್ದತೆ ಸಂಕೇತ ಎಂಬ ಸಂದೇಶ ಸಾರಿದರು.
ಚರ್ಚ್ ವೃತ್ತದಲ್ಲಿರುವ ಸಿ ಎಸ್ ಐ ಮಹಾ ದೇವಾಲಯದ ಕ್ರೈಸ್ತ ಬಾಂಧವರ ಸಾಮೂಹಿಕ ಪ್ರಾರ್ಥನೆಯಾದ ಬಳಿಕ ಸಂದೇಶ ನೀಡಿದ ಸಿ ಎಸ್ ಐ ಮಹಾ ದೇವಾಲಯದ ಸಭಾ ಪಾಲಕರು ಹಾಗೂ ತುಮಕೂರು ಕ್ಷೇತ್ರದ ಅಧ್ಯಕ್ಷ ಮಾರ್ಗನ್ ಸಂದೇಶ್, ಕ್ರಿಸ್ ಮಸ್ ಏಸುಕ್ರಿಸ್ತನ ಜನ್ಮದಿನದ ಸಂಕೇತ, ಮನುಷ್ಯರಿಗೋಸ್ಕರ ದೇವರು ಪರಲೋಕ ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು, ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಹಬ್ಬದ ಉದ್ದೇಶ ಎಂದರು.
ಕ್ರಿಸ್ ಮಸ್ ಹಬ್ಬ ಕ್ರೈಸ್ತರೆಲ್ಲರೂ ಬಹಳ ಉತ್ಸುಕತೆಯಿಂದ ಸಂತಸ, ಸಂಭ್ರಮದಿಂದ ಆಚರಿಸುವಂತಹ ಹಬ್ಬ, ಕ್ರೈಸ್ತರಿಗೆ ಮೂರು ಹಬ್ಬಗಳು ಮಹತ್ವದ್ದಾಗಿವೆ, ಕ್ರಿಸ್ ಮಸ್ ಹಬ್ಬವನ್ನು ಬೆಳಕಿನ ಹಬ್ಬವೆಂದು ಆಚರಿಸಲಾಗುತ್ತದೆ, ಏಸುಕ್ರಿಸ್ತನು ಬೆಳಕಾಗಿ ಬಂದಿದ್ದಾನೆ, ಹಾಗಾಗಿ ಎಲ್ಲಾ ಚರ್ಚ್ಗಳಲ್ಲಿ ಕ್ಯಾಂಡಲ್ಗಳನ್ನು ಹಿಡಿದು ಏಸುವಿನ ಬೆಳಕು ನಮ್ಮೆಲ್ಲ ಸಂಕಷ್ಟ ದೂರ ಮಾಡುತ್ತದೆ ಎಂದು ಹಬ್ಬ ಆಚರಿಸಲಾಗುತ್ತದೆ, ಡಿಸೆಂಬರ್ ಮೊದಲ ದಿನದಿಂದ ಈ ಹಬ್ಬದ ಸಡಗರ ಸಂಭ್ರಮ ಆರಂಭವಾಗುತ್ತದೆ ಎಂದರು.
ಬಹಳಷ್ಟು ವರ್ಷಗಳ ಹಿಂದೆ ಏಸುಕ್ರಿಸ್ತ ಹುಟ್ಟಿದಾಗ ಅಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ಪರಿಸ್ಥಿತಿ, ಬಡವರು, ನಿರ್ಗತಿಕರಿಗೆ ವಿರುದ್ಧವಾಗಿ ದೌರ್ಜನ್ಯ, ಶೋಷಣೆ ಮಾಡುವಂತಹ ಸನ್ನಿವೇಶ ಇದ್ದಾಗ ಏಸುಕ್ರಿಸ್ತ ಅಂತಹವರ ಪರವಾಗಿ ಸಮಾಜದಲ್ಲಿ ಶಾಂತಿ, ಸಮಾಧಾನ ತಂದು ದೇವರು ಬಡವರ ಪರ ಇದ್ದಾನೆ ಎಂದು ಸಾರಿ ಹೇಳಿದಂತಹ ಹಬ್ಬ ಇದಾಗಿದೆ ಎಂದು ಹೇಳಿದರು.
ಕ್ರಿಸ್ ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನ ಸೂಚಿಸುತ್ತದೆ, ಕ್ರಿಸ್ ಮಸ್ ಶಾಂತಿ ಸಮಾಧಾನದ ಹಬ್ಬ, ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದರು.
ನಗರದ ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಭಾನುವಾರ ರಾತ್ರಿ 11 ರಿಂದ ಮಧ್ಯ ರಾತ್ರಿವರೆಗೂ ಪ್ರಾರ್ಥನೆ ಸಲ್ಲಿಸಲಾಯಿತು, ನಂತರ ಬೆಳಗ್ಗೆಯೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
Comments are closed.