ಚಿರತೆಗಳಿಂದ ಮಾನವ ಹಾನಿ ತಪ್ಪಿಸಿ: ಜಿಲ್ಲಾಧಿಕಾರಿ

40

Get real time updates directly on you device, subscribe now.


ತುಮಕೂರು: ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಾಗೂ ವಿಶೇಷವಾಗಿ ತುರುವೇಕೆರೆ ತಾಲ್ಲೂಕಿನಲ್ಲಿ ಚಿರತೆಗಳು ಓಡಾಡುತ್ತಿರುವುದನ್ನು ಗಮನಿಸಲಾಗಿದ್ದು, ಚಿರತೆಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯುವುದರೊಂದಿಗೆ ಚಿರತೆಗಳಿಂದ ಮಾನವ ಹಾನಿ ಅಥವಾ ಪ್ರಾಣಿಗಳ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚಿರತೆಗಳ ಸುರಕ್ಷತಾ ಕ್ರಮಗಳ ಕುರಿತು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ಹೋಬಳಿ ಮಟ್ಟದಲ್ಲಿ ಈ ಕುರಿತು ಟಾಂಟಾಂ ಮೂಲಕ ವ್ಯಾಪಕ ಪ್ರಚಾರ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಗೆ ಎಲ್ಲಿಯಾದರೂ ಚಿರತೆಗಳ ಕುರುಹು ಕಂಡು ಬಂದಲ್ಲಿ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳಿಗೆ ತಕ್ಷಣವೇ ಟೋಲ್ ಫ್ರೀ ನಂಬರ್ 1926ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರಲ್ಲದೆ, ವಲಯ ಅರಣ್ಯಾಧಿಕಾರಿಗಳು ಮತ್ತು ವನರಕ್ಷಕರು ಸುರಕ್ಷತೆಯಿಂದ ಚಿರತೆಗಳ ಚಲನವಲನಗಳ ಬಗ್ಗೆ ನಿಗಾ ಇರಿಸಬೇಕು, ಅರಣ್ಯ ಪ್ರದೇಶಗಳ ಅಂಚಿನಲ್ಲಿ ಸುರಕ್ಷತೆಯಿಂದ ಸಂಚರಿಸಬೇಕು ಎಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿಗಳು ಆಯಾ ತಾಲ್ಲೂಕು ಮಟ್ಟದ ತಹಶೀಲ್ದಾರರು, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸುರಕ್ಷತಾ ಕ್ರಮಗಳ ಕುರಿತು ಸೂಚನೆ ನೀಡಬೇಕು, ಸಂಜೆ, ರಾತ್ರಿ ಸಮಯದಲ್ಲಿ ಅರಣ್ಯದಂಚಿನ ಪ್ರದೇಶದಲ್ಲಿ ಮಕ್ಕಳು, ಹಿರಿಯರು ಅನಾವಶ್ಯಕವಾಗಿ ಹೊರಗಡೆ ಸಂಚರಿಸದಂತೆ ತಿಳುವಳಿಕೆ ನೀಡಬೇಕು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು, ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಗ್ರೂಪ್ ನಲ್ಲಿ ತಾವು ವಿವಿಧ ಕಡೆಗಳಲ್ಲಿ ಭೇಟಿ ನೀಡಿದ ಬಗ್ಗೆ ಜಿಪಿಎಸ್ ನೊಂದಿಗೆ ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ವಿವರ ತಿಳಿಸಬೇಕು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಂಡಗಳನ್ನು ರಚಿಸಿ ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್. ಅನುಪಮ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!