ಸಾಹಿತ್ಯ ಸಮಾಜದ ಪ್ರತಿಬಿಂಬವಾಗಲಿ: ಚ.ಹ.ರಘುನಾಥ್

ಶಿರಾದಲ್ಲಿ ವಿಜೃಂಭಣೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

49

Get real time updates directly on you device, subscribe now.


ಶಿರಾ: ಸಾಹಿತ್ಯ ಮನರಂಜನೆಗಷ್ಟೆ ಸೀಮಿತವಾಗದೆ, ಸಮಾಜದ ಪ್ರತಿಬಿಂಬವೂ, ಗತಿಬಿಂಬವೂ ಆಗಿರಬೇಕು, ಸಮಾಜದ ತಳಸ್ತರದ ಜನರ ನೋವು- ಅವಮಾನಗಳಿಗೆ ಧ್ವನಿಯಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚ.ಹ.ರಘುನಾಥ್ ಹೇಳಿದರು.
ನಗರದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ 6ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ನಿತ್ಯೋತ್ಸವವಾಗಬೇಕು, ಕನ್ನಡ ಭಾಷೆ ಜನರಿಗೆ ತಲುಪುವ ಭಾಷೆಯಾಗಬೇಕು, ಕನ್ನಡ ಸಾಹಿತ್ಯವು ಜನ ಸಾಮಾನ್ಯರ ಭಾಷೆಯಾಗಬೇಕು, ಸಾಹಿತ್ಯದ ಮೂಲಕ ಜನರ ಜೀವನ ವಿಕಾಸ ಆಗಬೇಕು ಆಗ ಸಾಹಿತ್ಯ ಮತ್ತು ಕಲೆ ಜೀವಂತವಾಗಿರುತ್ತದೆ, ಬರಗೂರು ರಾಮಚಂದ್ರಪ್ಪ ಮತ್ತು ಸಿದ್ದಲಿಂಗಯ್ಯ ಅವರು ಶಿರಾ ಸೀಮೆ ಕನ್ನಡ ಸಾಹಿತ್ಯ ಮತ್ತು ಸಿನಿಮಾಕ್ಕೆ ಕನ್ನಡ ವಿವೇಕ ಪರಂಪರೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ, ಇವರು ಶಿರಾ ತಾಲೂಕಿನ ಹೆಮ್ಮೆ ಎಂದ ಅವರು ಸಿದ್ದಲಿಂಗಯ್ಯ ಅವರು ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯ ಸಿನಿಮಾಗಳ ಮೂಲಕ ಗ್ರಾಮ ಭಾರತವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ, ಅವರ ಮತ್ತೊಂದು ಹೇಮಾವತಿ ಸಿನಿಮಾ ಪ್ರಸ್ತುತ ದಿನದ ವಿವೇಕಕ್ಕೆ ದೊಡ್ಡ ಮಾದರಿಯಾಗಿತ್ತು ಎಂದರು.

ಬರದ ಕಾರಣ ನೀಡಿ ಸರಕಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಿದೆ, ನನ್ನ ಅಭಿಪ್ರಾಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಭ್ರಮ ಕಾಲದ ಚಟುವಟಿಕೆಗಳಾಗಬಾರದು, ವಿಚಾರವಂತಿಕೆಯುಳ್ಳ ಅರ್ಥಪೂರ್ಣ ಸಮ್ಮೇಳನಗಳಾಗಬೇಕು ಎಂದರು.

ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಕನ್ನಡ ಪರ ವಾತಾವರಣ ನಿರ್ಮಾಣ ಮಾಡುವಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಪಾತ್ರ ಬಹುಮುಖ್ಯವಾಗಿದೆ, ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಶಿರಾ ತಾಲೂಕಿನಲ್ಲಿ ಹೋಬಳಿ ಮಟ್ಟದಿಂದಲೂ ಯಶಸ್ವಿಯಾಗಿ ಮಾಡಲಾಗುತ್ತಿದೆ, ಇದರಿಂದ ಕನ್ನಡದ ಮನೋಧರ್ಮ ಬೆಳೆಯುತ್ತಿದೆ, ಕನ್ನಡ ಉಳಿಸಬೇಕಾದರೆ ಮೊದಲು ಕನ್ನಡ ನಾಡಿನ ಜನರನ್ನು ಬದುಕಿಸಬೇಕು, ಆಗ ಅವರು ಕನ್ನಡ ಉಳಿಸುತ್ತಾರೆ, ಜನರ ಹೊಟ್ಟೆೆಪಾಡನ್ನು ನೀಗಿಸುವ ಕೆಲಸ ಮಾಡಬೇಕು, ಕನ್ನಡವನ್ನು ಎಲ್ಲಾ ಜಾತಿ ಧರ್ಮದವರು ಕಟ್ಟಿದ್ದಾರೆ, ಕನ್ನಡ ಭಾಷೆ ಜಾತಿವಾದ ಮಾಡುವುದಿಲ್ಲ, ಜಾತ್ಯತೀತ ಭಾಷೆ ಸೌಹಾರ್ಧ ಭಾಷೆ ಕನ್ನಡ, ಎಲ್ಲರೂ ಸೇರಿ ಕಟ್ಟಿ ಬೆಳೆಸಿದ ಭಾಷೆ ಕನ್ನಡ ಎಂದಿಗೂ ಅಳಿಯುವುದಿಲ್ಲ ಎಂದರು.

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ತಾಲೂಕು ಆಂಧ್ರದ ಗಡಿಯಲ್ಲಿದ್ದು, ಈ ಭಾಗದಲ್ಲಿ ಕನ್ನಡ ನಾಡು ನುಡಿಗೆ ಬೆಳವಣಿಗೆಗೆ ಅವಿರತ ಶ್ರಮ ಆಡಳಿತದಿಂದ ಮಾಡುತ್ತಿದ್ದೇವೆ, ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಸರಕಾರ ಶ್ರಮಿಸುತ್ತಿದೆ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಕನ್ನಡ ಭಾಷೆ ಉಳಿಯಬೇಕಾದರೆ ಕರ್ನಾಟಕದಲ್ಲಿರುವ ಕನ್ನಡ ಶಾಲೆಗಳು, ಸರಕಾರಿ ಶಾಲೆಗಳು ಉಳಿಯಬೇಕು, ಸರಕಾರಗಳು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ನೀಡಿ, ಸಮರ್ಪಕ ಶಿಕ್ಷಕರನ್ನು ನೇಮಿಸಿದರೆ ಕನ್ನಡ ಶಾಲೆಗಳು ಉಳಿಯಲು ಸಾಧ್ಯ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸರಕಾರಿ ಶಾಲೆಗಳಿಗೆ ಸರಿಯಾಗಿ ಮೂಲಭೂತ ಸೌಲಭ್ಯ ನೀಡಲಾಗುತ್ತಿಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ 10 ವರ್ಷಗಳಲ್ಲಿ ಸರಕಾರಿ ಶಾಲೆಗಳು, ಕನ್ನಡ ಶಾಲೆಗಳು ಇರುವುದಿಲ್ಲ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ, ಕನ್ನಡ ಭಾಷೆ ಕೇವಲ ಭಾಷೆಯಲ್ಲ ಅದೊಂದು ಅಸ್ಮಿತೆ, ಜೀವನ ಶೈಲಿ, ಜೀವನ ವಿಧಾನ, ಜಗತ್ತಿನ 4000 ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠ ಭಾಷೆ ಕನ್ನಡ ಭಾಷೆಯಾಗಿದೆ ಎಂದ ಅವರು ಇಂದು ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಕವಿಗಳು, ಸಾಹಿತಿಗಳು, ಕನ್ನಡ ಪ್ರೇಮಿಗಳು ಆಗಮಿಸಿರುವುದು ಸಂತಸ ತಂದಿದೆ, ಬಂಡಾಯ ಸಾಹಿತ್ಯದ ಮೂಲಕ ಶಿರಾ ತಾಲೂಕು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಬಂಡಾಯ ಸಾಹಿತ್ಯದ ಮೂಲಕ ಸಾಹಿತ್ಯ ರಚಿಸಿದವರು ಎಂದರು.

ಸಮ್ಮೇಳನಾಧ್ಯಕ್ಷರ ಮೆರಗಣಿಗೆ: ಶಿರಾದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಚ.ಹ.ರಘುನಾಥ ಅವರನ್ನು ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ತಾಳ ಮದ್ದಳೆಗಳಿಂದ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಸಮ್ಮೇಳನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ.ಹನುಮಂತ ರಾಯಪ್ಪ, ನಗರಸಭೆ ಅಧ್ಯಕ್ಷೆ ಪೂಜಾ, ತಹಶೀಲ್ದಾರ್ ದತ್ತಾತ್ರೇಯ ಗಾದ, ಸಹಾಯಕ ಕೃಷಿ ನಿರ್ದೇಶಕ ಡಾ.ಹೆಚ್.ನಾಗರಾಜು, ಪೌರಾಯುಕ್ತ ರುದ್ರೇಶ್, ತಾಪಂ ಇಓ ಅನಂತರಾಜು, ಪಿ.ಹೆಚ್.ಮಹೇಂದ್ರಪ್ಪ, ವೈ.ನರೇಶ್ ಬಾಬು, ಕಸಾಪ ಗೌರವ ಕಾರ್ಯದರ್ಶಿ ಪರಮೇಶ್ ಗೌಡ, ಕೋಶಾಧ್ಯಕ್ಷ ಹಿಮಂತರಾಜು, ರೇಣುಕಮ್ಮ, ಹೆಂದೊರೆ ಶಿವಣ್ಣ, ಜಯ ರಾಮಕೃಷ್ಣ, ನರಸಿಂಹರಾಜು, ಸಕ್ರ ನಾಗರಾಜು, ಪ.ನಾ.ಹಳ್ಳಿ ಹರೀಶ್ ಕುಮಾರ್, ಬ.ಹ.ಓಂಕಾರ್, ರಮೇಶ್.ಎಸ್.ಎಲ್, ಅಶ್ವಿನಿ, ಆರ್.ಸಿ.ರಾಮಚಂದ್ರಪ್ಪ, ರಶ್ಮಿಕುಮಾರ್, ಮಂಜುಳ.ಬಿ.ಕೆ. ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!