ತುಮಕೂರು: ಸಮಾಜದ ಅನಿಷ್ಟ ಆಚರಣೆಯಾದ ದೇವದಾಸಿ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ, ಅಧ್ಯಯನ, ಸಂಶೋಧನೆಗಳೊಂದಿಗೆ ಈ ಪದ್ಧತಿಯನ್ನು ಅವಲೋಕಿಸಿ ಸಮಸ್ಯೆಗಳ ಸ್ವರೂಪ ಅರಿತು, ಪರಿಹಾರ ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂದು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ್ದ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಮತ್ತು ಸಂವಾದಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಾಸ್ತವತೆಯ ಅರಿವು ಮೂಡಿಸುವ ಇಂಥ ಸಂಶೋಧನಾಧಾರಿತ ಸಾಕ್ಷ್ಯ ಚಿತ್ರಗಳು ತಳ ಸಮುದಾಯದ ನೋವನ್ನು ಹೊರ ಹಾಕುತ್ತವೆ, ಅನಿಷ್ಟ ಪದ್ಧತಿಗಳ ನಿರ್ಮೂಲನೆಯಲ್ಲಿ ಸರ್ಕಾರದ ಜೊತೆ ವಿದ್ಯಾವಂತ ಸಮಾಜವೂ ಅರಿವು ಮೂಡಿಸುವಲ್ಲಿ ಕೈಜೋಡಿಸಬೇಕು, ಜ್ಞಾನಾರ್ಜನೆಗೆ ಪೂರಕವಾದ ಸಮಾಜ ನಿರ್ಮಿಸಿದಾಗ ನಕಾರಾತ್ಮಕ ಅಂಶಗಳನ್ನು ತೊರೆದು ಜೀವಿಸಬಹುದು ಎಂದರು.
ವೇಶ್ಯಾವಾಟಿಕೆ, ಮಂಗಳಮುಖಿಯರ ಹಲವಾರು ಸಮಸ್ಯೆಗಳಿಗೆ ಸಮಾಜವೇ ಉತ್ತರಿಸಬೇಕು, ಈ ಆಚರಣೆ, ಪದ್ಧತಿಗಳೆಲ್ಲವೂ ಪ್ರಸ್ತುತ ಕಾಲಮಾನದ ಸಮಸ್ಯೆಗಳಾಗಿವೆ, ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ, 21ನೇ ಜ್ಞಾನಾರ್ಜನೆಯ ಶತಮಾನದಲ್ಲಿ ಸಂಶೋಧನೆ, ಆವಿಷ್ಕಾರಗಳಾಗಬೇಕು, ಮೂಢನಂಬಿಕೆಗಳನ್ನು ಶಿಕ್ಷಣನಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು ಎಂದು ಹೇಳಿದರು.
ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, 1930ರ ವರೆಗೂ ದೇವದಾಸಿ ಪದ್ಧತಿ ಎನ್ನುವುದು ದೈವಿಕ ಹಾಗೂ ಪವಿತ್ರ ಆಚರಣೆಯಾಗಿತ್ತು, ಹೆಣ್ಣನ್ನು ಲಕ್ಷ್ಮೀ ಎಂದು ಪೂಜಿಸುತ್ತಿದ್ದ ಕಾಲವದು, ಕಲೆಯ ಅನಾವರಣವೇ ದೇವದಾಸಿ ಪದ್ಧತಿ ಎಂಬುದಾಗಿತ್ತು, ಮೂಢನಂಬಿಕೆ, ಭಯ, ತಳ ಸಮುದಾಯದ ಆರ್ಥಿಕ ಪರಿಸ್ಥಿತಿಯ ಅಳಲನ್ನು ಕೀಳು ಮಟ್ಟದಲ್ಲಿ ಬಳಸಿಕೊಳ್ಳುವ ವರ್ಗದಿಂದಾಗಿ ಈ ಅನಿಷ್ಟ ಪದ್ಧತಿ ವೇಶ್ಯಾವಾಟಿಕೆಯಾಗಿ ಬದಲಾಗಿ ಇಂದಿಗೂ ಜೀವಂತವಾಗಿದೆ ಎಂದು ತಿಳಿಸಿದರು.
ಸಾಕ್ಷ್ಯ ಚಿತ್ರದ ನಿರ್ದೇಶಕಿ ಪೂರ್ಣಿಮಾ ರವಿ ಮಾತನಾಡಿ, 2008ರಲ್ಲಿ ಸರ್ಕಾರವು ಮಾಡಿದ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ 35 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ 46000 ದೇವದಾಸಿಯರಿದ್ದಾರೆ, ಕರ್ನಾಟಕ ದೇವದಾಸಿ ವಿಮೋಚನ ಸಮಿತಿಯ ಪ್ರಕಾರ ವಯಸ್ಸಿನ ಮಿತಿಯನ್ನು ಪರಿಗಣಿಸದೆಯೆ ಒಟ್ಟು 80000ಕ್ಕೂ ಹೆಚ್ಚು ದೇವದಾಸಿಯರಿದ್ದಾರೆ, 1982ರಲ್ಲೇ ನಿಷೇಧವಾದರೂ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಇಂದಿಗೂ ಕಾಡುತ್ತಿರುವ ಅನಿಷ್ಟ ಆಚರಣೆ ದೇವದಾಸಿ ಪದ್ಧತಿ ಎಂದರು.
ದೇವದಾಸಿ ಪದ್ಧತಿಯಿಂದ ಕೆಲ ವರ್ಗದವರನ್ನು ಹೊರತಂದು, ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟು, ಕೆಲವೇ ದಿನಗಳಲ್ಲಿ ದೇವದಾಸಿ ಪದ್ಧತಿ ಮುಕ್ತ ಸಮಾಜ ನಿರ್ಮಾಣದ ಕನಸನ್ನು ಹೊತ್ತಿರುವುದೇ ಈ ಸಾಕ್ಷ್ಯ ಚಿತ್ರ ಎಂದು ಹೇಳಿದರು.
78 ನಿಮಿಷಗಳ ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್ ಸಾಕ್ಷ್ಯ ಚಿತ್ರದ ಪ್ರದರ್ಶನದಲ್ಲಿ ವಿವಿಯ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಕೆಲವು ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ದೇವದಾಸಿ ಪದ್ಧತಿಯ ನೋವುಗಳನ್ನು ಅನಾವರಣಗೊಳಿಸುವ ಸಾಕ್ಷ್ಯ ಚಿತ್ರದ ಕುರಿತು ವಿದ್ಯಾರ್ಥಿಗಳೊಂದಿಗೆ ಸಾಕ್ಷ್ಯ ಚಿತ್ರದ ನಿರ್ದೇಶಕಿ ಮತ್ತು ಕಾರ್ಯ ನಿರ್ವಾಹಕ ನಿರ್ಮಾಪಕ ಸಂವಾದ ನಡೆಸಿದರು.
ಸಾಕ್ಷ್ಯ ಚಿತ್ರದ ಕಾರ್ಯ ನಿರ್ವಾಹಕ ನಿರ್ಮಾಪಕ ರವಿ ನಾರಾಯಣ, ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್ ಬಿ., ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರಶುರಾಮ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಡಾ.ಸಿಬಂತಿ ಪದ್ಮನಾಭ.ಕೆ.ವಿ. ಹಾಜರಿದ್ದರು.
Comments are closed.