ಕಾಂಗ್ರೆಸ್ ಕಚೇರಿಯಲ್ಲಿ ಸದಸ್ಯತ್ವ ಪಡೆದ ಗೌರಿಶಂಕರ್

32

Get real time updates directly on you device, subscribe now.


ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಇದೇ ಮೊದಲ ಬಾರಿಗೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದರು.

ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮೊದಲ ಬಾರಿಗೆ ಆಗಮಿಸಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ದೇವರಾಜು, ಗ್ರಾಮಾಂತರದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನರಸಿಂಹ ಮೂರ್ತಿ, ಕೈದಾಳ ರಮೇಶ್ ಅವರು ಬರಮಾಡಿಕೊಂಡು, ಪ್ರಾಥಮಿಕ ಸದಸ್ಯತ್ವದ ಅರ್ಜಿ ತುಂಬಿ, ಶುಲ್ಕ ಪಡೆದು, ಪ್ರಾಥಮಿಕ ಸದಸ್ಯತ್ವ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೊರತೆಯಿಲ್ಲ, ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬರುವಂತೆ ಮಾಡುವುದು ನಮ್ಮ ಮುಂದಿರುವ ಗುರಿ, ಆ ಗುರಿ ತಲುಪಲು ಪಕ್ಷದ ಹಿರಿಯ ಮುಖಂಡರಾದ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಗೂ ಇತರೆ ನಾಯಕರ ಸಲಹೆ ಪಡೆದು ಪಕ್ಷ ಬಲಪಡಿಸ ಲಾಗುವುದು ಎಂದರು.

ನನ್ನೊಂದಿಗೆ ಜೆಡಿಎಸ್ ಪಕ್ಷದ ಶೇ.80 ರಷ್ಟು ಕಾರ್ಯಕರ್ತರು, ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ಏಕಾಏಕಿ ನಾವು ಹತ್ತಾರು ವರ್ಷಗಳಿಂದ ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದವೋ ಅವರೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಂಗಾಲಾಗಿದ್ದರು, ಅವರಿಗೆ ರಾಜಕೀಯ ನೆಲೆ ಕಲ್ಪಿಸುವುದರ ಜೊತೆಗೆ ನನ್ನ ರಾಜಕೀಯ ಅಸ್ಥಿತ್ವ ಅವಲೋಕಸಿ ಕಾರ್ಯಕರ್ತರ ಸಲಹೆಯಂತೆ ಕಾಂಗ್ರೆಸ್ ಸೇರಿದ್ದೇನೆ, ಪಕ್ಷವನ್ನು ಸದೃಢಗೊಳಿಸಿ ಲೋಕಸಭೆ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೇ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಪಕ್ಷಕ್ಕೆ ಭದ್ರ ಬುನಾದಿ ಹಾಕಲಾಗುವುದು ಎಂದು ಗೌರಿಶಂಕರ್ ನುಡಿದರು.

ಕಾಂಗ್ರೆಸ್ ಮುಖಂಡರಾದ ಕಲ್ಲಹಳ್ಳಿ ದೇವರಾಜು ಮಾತನಾಡಿ, ಗೌರಿಶಂಕರ್ ಆಗಮನದಿಂದ ಗ್ರಾಮಾಂತರದಲ್ಲಿ ಪಕ್ಷಕ್ಕೆ ಬಲ ಬಂದಿದೆ, ಬೇರೆ ಪಕ್ಷದ ನಾಯಕರು ನಮ್ಮ ಪಕ್ಷಕ್ಕೆ ಬಂದಾಗ ಸಣ್ಣ ಪುಟ್ಟ ಗೊಂದಲ ಸಹಜ, ಅವೆಲ್ಲವನ್ನು ಮರೆತು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೌರಿಶಂಕರ್ ನೇತೃತ್ವದಲ್ಲಿ ಬಲಪಡಿಸುತ್ತೇವೆ, ಕ್ಷೇತ್ರದ ಕಾರ್ಯಕರ್ತರ ಸಹಕಾರ ಇರಲಿ ಎಂದರು.
ಮಾಜಿ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಪಾಲಿಕೆ ಸದಸ್ಯ ನಯಾಜ್ ಅಹಮದ್ ಮಾತನಾಡಿದರು. ಈ ವೇಳೆ ಪಾಲಿಕೆ ಸದಸ್ಯರಾದ ಕೆ.ಕುಮಾರ್, ಇನಾಯತ್, ಪಾಲನೇತ್ರಯ್ಯ, ವಿಜಯಕುಮಾರ್, ಸುಜಾತ, ನ್ಯಾತೇಗೌಡ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!