ಕುಣಿಗಲ್: ಯಡಿಯೂರು ಶ್ರೀಸಿದ್ದಲಿಂಗೇಶ್ವರರು ತಪೋಗೈದ ತಪೋಭೂಮಿ ಕಗ್ಗೆರೆ ದೇವಾಲಯವನ್ನು ಪುನರ್ ನಿರ್ಮಾಣ ನೆಪದಲ್ಲಿ ಕೆಡವಿ ಮೂರು ತಿಂಗಳಾದರೂ ಯಾವುದೇ ಕಾಮಗಾರಿ ಆರಂಭವಾಗದೆ ಇರುವ ಬಗ್ಗೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಗ್ಗೆರೆ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯ ಸುಮಾರು 450 ವರ್ಷಕ್ಕೂ ಹಳೆಯದಾದ ಹಿನ್ನೆಲೆಯಲ್ಲಿ ದೇವಾಲಯ ನವೀಕರಣ ಕಾಮಗಾರಿಗೆ ದೇವಾಲಯದ ಭಕ್ತರು ಸೇರಿದಂತೆ ಗ್ರಾಮಸ್ಥರ ಬೇಡಿಕೆ ಇತ್ತು, ಮಳೆಗಾಲದಲ್ಲಿ ನಾಗಿನಿ ಉಕ್ಕಿ ಹರಿದು ದೇವಾಲಯದೊಳಗೆ ನದಿ ನೀರು ನಿಂತು ಧಾರ್ಮಿಕ ಆಚರಣೆಗೆ ತೊಂದರೆಯಾಗುತ್ತಿದ್ದುದರಿಂದ ದೇವಾಲಯ ನವೀಕರಣ ಕಾಮಗಾರಿಗೆ ಸತತ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ ಸರ್ಕಾರದ ಮೇಲೆ ಒತ್ತಡ ಹಾಕಿ ನಾಲ್ಕು ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು, ದೇವಾಲಯ ಪುನರ್ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ರಂಗನಾಥ ಕಳೆದ ಮೂರು ತಿಂಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಿ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ನಿರ್ವಹಣೆ ಜೊತೆಯಲ್ಲಿ ದೇವಾಲಯವೂ ಭಕ್ತರ ಧಾರ್ಮಿಕ ಭಾವನೆಯ ಸಂಕೇತವಾದ ಕಾರಣ ಶೀಘ್ರ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು, ಆದರೆ ದೇವಾಲಯ ಗುದ್ದಲಿಪೂಜೆ ನೆರವೇರಿದ ನಂತರ ಗುತ್ತಿಗೆದಾರರು ದೇವಾಲಯ ನೆಲಸಮ ಮಾಡಿದ್ದು, ದೇವಾಲಯ ಪುನರ್ ನಿರ್ಮಾಣ ಪೂರ್ವಕ ಯಾವುದೇ ಕಾಮಗಾರಿ ಆರಂಭಿಸಿಲ್ಲ, ಈಬಗ್ಗೆ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಗ್ಗೆರೆ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್ ಮಾತನಾಡಿ, ದೇವಾಲಯಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ, ಇತ್ತೀಚೆಗೆ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿಯವರು ಭೇಟಿ ನೀಡಿ ಕ್ಷೇತ್ರದ ಮಹಿಮೆ ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ, ಕ್ಷೇತ್ರಕ್ಕೆ ಬರುವ ಭಕ್ತರು ದೇವಾಲಯ ಕಾಮಗಾರಿ ಆರಂಭವಾಗದೆ ಇರುವ ಬಗ್ಗೆ ಸ್ಥಳೀಯರನ್ನು ಪ್ರಶ್ನಿಸುತ್ತಿದ್ದಾರೆ, ಕಾಮಗಾರಿ ನಿರ್ವಹಣೆಗೆ ಕಲ್ಲುಗಳು ಸೇರಿದಂತೆ ಯಾವುದೇ ಕಾರ್ಮಿಕರು ಬಂದಿಲ್ಲ, ಮೂರು ತಿಂಗಳು ಕಳೆಯುತ್ತಾ ಬಂದರೂ ದೇವಾಲಯ ನಿರ್ಮಾಣದ ಕಾಮಗಾರಿ ಆರಂಭವಾಗದೆ ಇರುವುದು ಬೇಸರದ ಸಂಗತಿ, ಸಂಕ್ರಾಂತಿ ಹಬ್ಬದೊಳಗೆ ದೇವಾಲಯ ನಿರ್ಮಾಣ ಕಾಮಗಾರಿ ಆರಂಭಿಸದೆ ಇದ್ದಲ್ಲಿ ದೇವಾಲಯದ ಭಕ್ತರೊಡನೆ ಚರ್ಚಿಸಿ ಯಡಿಯೂರು ವರೆಗೂ ಪಾದಯಾತ್ರೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲು ಚಿಂತನೆ ನಡೆಸಲಾಗಿದೆ, ಈನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಿದರೂ ಕಾಮಗಾರಿ ಆರಂಭವಾಗಿಲ್ಲ, ಸಂಕ್ರಾಂತಿ ನಂತರ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
Comments are closed.