ತುಮಕೂರು: ಕಲೆ, ಸಾಹಿತ್ಯ, ಶಿಕ್ಷಣಗಳ ಜೊತೆಗೆ ವೈವಿಧ್ಯಮಯ ಸಂಗೀತ, ನೃತ್ಯ, ಜಾನಪದ, ಯಕ್ಷಗಾನ ಹಾಗೂ ರಂಗಭೂಮಿಯ ಸಂಗಮ ಹಾಗೂ ಶೈಕ್ಷಣಿಕವಾಗಿ ಕಲೆ ಸಾಹಿತ್ಯ ಸಂಸ್ಕೃತಿಗಳ ಶ್ರೀಮಂತಿಕೆಯಿಂದ ಕೂಡಿರುವ ತುಮಕೂರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಿಸೆಂಬರ್ 29 ಮತ್ತು 30 ರಂದು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಡು ನುಡಿ ಜಲ ಕುರಿತಾದ ಅರ್ಥಪೂರ್ಣ ವಿಚಾರ ವಿನಿಮಯಗಳಿಗೆ ಸಮ್ಮೇಳನ ಒಂದು ವೇದಿಕೆಯಾಗಿದೆ, ನಮ್ಮ ಜಿಲ್ಲೆಯವರೇ ಆದ ಅಂತಾರಾಷ್ಟ್ರೀಯ ಖ್ಯಾತಿಯ ಸಾಹಿತಿ ಡಾ.ಹೆಚ್.ಎಸ್.ಶಿವಪ್ರಕಾಶ್ ಸಮ್ಮೇಳನಾಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.
ಡಿಸೆಂಬರ್ 29 ರಂದು ಶುಕ್ರವಾರ ಬೆಳಗ್ಗೆ 7.30 ಗಂಟೆಗೆ ಧ್ವಜಾರೋಹಣದ ಮೂಲಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ, ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ.ಕರಾಳೆ ರಾಷ್ಟ್ರ ಧ್ವಜಾರೋಹಣ ಮಾಡುವರು, ಮಹಾ ನಗರಪಾಲಿಕೆಯ ಉಪ ಮಹಾಪೌರ ಟಿ.ಕೆ.ನರಸಿಂಹ ಮೂರ್ತಿ ನಾಡ ಧ್ವಜಾರೋಹಣ ನೆರವೇರಿಸುವರು, ಅಂದು ಬೆಳಗ್ಗೆ 8 ಗಂಟೆಗೆ ಮಹಾ ನಗರಪಾಲಿಕೆಯ ಆವರಣದಿಂದ ಸಮ್ಮೇಳನಾಧ್ಯಕ್ಷರ ವೈಭವಯುತ ಮೆರವಣಿಗೆ ನಡೆಯಲಿದೆ, ಜಿಲ್ಲೆಯ ಜಾನಪದ ಹಾಗೂ ಸಾಂಸ್ಕೃತಿಕ ಪ್ರಕಾರಗಳಾದ ಕೋಲಾಟ, ವೀರಗಾಸೆ, ನಂದೀಧ್ವಜ, ಸೋಮನ ಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿ ಗೊಂಬೆ, ಕೋಳಿ ನೃತ್ಯಗಳ ಜೊತೆಗೆ ಶಾಲಾ ಕಾಲೇಜುಗಳ ಸಾಂಸ್ಕೃತಿಕ ತಂಡ ಭಾಗವಹಿಸಲಿವೆ, ಪಾಲಿಕೆಯ ಆವರಣದಿಂದ ಬಿ.ಜಿ.ಎಸ್. ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಗುಂಚಿ ಚೌಕದಲ್ಲಿರುವ ಬಿ.ಶಿವಮೂರ್ತಿ ಶಾಸ್ತ್ರಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಮಾರ್ಗವಾಗಿ ಪ್ರದಾನ ವೇದಿಕೆ ತಲುಪುವುದು.
ಅಂದು ಬೆಳಗ್ಗೆ 10 ಗಂಟೆಗೆ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯ ಪ್ರದಾನ ವೇದಿಕೆಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮಿ, ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದಜೀ ಮಹಾರಾಜ್ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ, ಖ್ಯಾತ ಕವಿಗಳು, ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರು ಸಮ್ಮೇಳನದ ಉದ್ಘಾಟನೆ ನೆರವೇರಿಸುವರು, ಅಂದು ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡುವರು.
ನವ ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಮ್ಮೇಳನದ ಸ್ಮರಣ ಸಂಚಿಕೆ ಕಲ್ಪಸೌರಭ ಬಿಡುಗಡೆ ಮಾಡುವರು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ.ವಿ.ನಾಗರಾಜರಾವ್ ಪ್ರಸ್ತುತ ಸಮ್ಮೇಳನಾಧ್ಯಕ್ಷ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರಿಗೆ ಧ್ವಜ ಹಸ್ತಾಂತರ ಮಾಡುವರು, ಖ್ಯಾತ ವಿಮರ್ಶಕರಾದ ಎಂ.ಎಸ್.ಆಶಾದೇವಿ ಸಮ್ಮೇಳನಾಧ್ಯಕ್ಷರ ಕೃತಿ ಮುಗಿಲ ಜಹಜು ಬಿಡುಗಡೆ ಮಾಡುವರು, ಸಿಹಿಜೀವಿ ವೆಂಕಟೇಶ್ ಅವರ ಕರ್ನಾಟಕದ ಏಳು ಅದ್ಬುತಗಳು ಕೃತಿಯನ್ನು ಶಾಸಕ ವೈ.ಎ.ನಾರಾಯಣ ಸ್ವಾಮಿ ಬಿಡುಗಡೆಗೊಳಿಸುವರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆಯಲ್ಲಿ ಶಾಸಕರಾದ ಆರ್.ರಾಜೇಂದ್ರ, ಕೆ.ಷಡಕ್ಷರಿ, ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ವಿವಿಧ ಲೇಖಕರ ಕೃತಿ ಬಿಡುಗಡೆ ಮಾಡುವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಪುಸ್ತಕ ಪ್ರದರ್ಶನ ಉದ್ಘಾಟನೆ ಮಾಡುವರು, ಮಹಾ ನಗರಪಾಲಿಕೆ ಆಯುಕ್ತ ಅಶ್ವಿಜ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಮುರಳೀಧರ ಹಾಲಪ್ಪ, ಎಸ್.ಪಿ.ಚಿದಾನಂದ್, ಎನ್.ಬಿ.ಪ್ರದೀಪ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಡಿಸೆಂಬರ್ 30 ರ ಶನಿವಾರ ಬೆಳಿಗ್ಗೆ ಜಿಲ್ಲೆಯ ಜಾನಪದ ತಜ್ಞ ಡಾ.ಚಿಕ್ಕಣ್ಣಯಣ್ಣೆಕಟ್ಟೆಯವರ ನೇತೃತ್ವದಲ್ಲಿ ಜಿಲ್ಲೆಯ ಜಾನಪದ ಸಿರಿ ಕುರಿತು ವಿಚಾರ ಸಂಕಿರಣ ನಡೆಯಲಿದೆ, ಜಾನಪದ ಪ್ರಕಾರಗಳ ಕುರಿತು ವಿವಿಧ ಸಾಹಿತಿಗಳು ಪ್ರಬಂಧ ಮಂಡಿಸಲಿದ್ದಾರೆ, ಜಿಲ್ಲೆಯ ಸಾಧಕ ಸಾಹಿತಿ ಕಲಾವಿದರ ಕುರಿತು ಚಿಂತನಾ ಗೋಷ್ಠಿ ಹಿರಿಯ ಸಾಹಿತಿ ಡಾ.ಸಂಪಿಗೆ ತೋಂಟದಾರ್ಯ ಅಧ್ಯಕ್ಷತೆಯಲ್ಲಿ ಜರುಗಲಿದೆ, ಜಿಲ್ಲೆಯ ಸಾಹಿತಿಗಳಾದ ವೀ.ಚಿಕ್ಕವೀರಯ್ಯ, ಡಾ.ಸಾ.ಶಿ.ಮರುಳಯ್ಯ, ಹೆಚ್.ಜಿ.ಸಣ್ಣಗುಡ್ಡಯ್ಯ, ಟಿ.ಎಸ್.ಲೋಹಿತಾಶ್ವ ಮತ್ತು ಪ್ರೊ.ಕೆ.ಬಿ.ಸಿದ್ದಯ್ಯನವರ ಸಾಹಿತ್ಯ ಕೃತಿಗಳ ಕುರಿತು ವಿವಿಧ ಸಾಹಿತಿಗಳು ಮಾತನಾಡುವರು ಎಂದು ಮಾಹಿತಿ ನೀಡಿದರು.
ತುಮಕೂರು ತಾಲ್ಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್, ಕಸಾಪ ನಗರ ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್, ಸಾಂಸ್ಕೃತಿಕ ಸಂಚಾಲಕ ಕೆಂಕೆರೆ ಮಲ್ಲಿಕಾರ್ಜುನ್, ಸಂಘಟನಾ ಕಾರ್ಯದರ್ಶಿ ತೇಜಸ್ವಿ, ಮಹಿಳಾ ಪ್ರತಿನಿಧಿ ರಾಣಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.
Comments are closed.